ವಿಜಯಪುರದಲ್ಲಿ ಏಳು ಮಕ್ಕಳ ತುಂಬು ಕುಟುಂಬದ ಕೊನೆಯ ಮಗನಿಗೆ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸತ್ತಾಗ ತುಂಬ ಬೇಸರವಾಯಿತು. ಆಗಿನ್ನೂ ಆರನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ ಶಾಲೆಯ ಗೋಡೆಗೆ ನೇತುಹಾಕಿದ್ದ ನೆಹರೂ ಫೋಟೊ ನೋಡಿಕೊಂಡು ಒಂದು ಚಿತ್ರ ಬಿಡಿಸಿದ. ಅದು ಆತ ಬರೆದ ಮೊದಲ ಚಿತ್ರ. ಸ್ವಪ್ರೇರಣೆಯಿಂದ ಅಂಥದೊಂದು ಚಿತ್ರ ಬಿಡಿಸಿದ ಹುಡುಗ ಮುಂದೆ ಕಲಾರಂಗದಲ್ಲಿ ಮೂಡಿಸಿದ ಹೆಜ್ಜೆಗುರುತುಗಳು ನಿಚ್ಚಳವಾಗಿವೆ.

ಕಲಾ ಪರಿಚಾರಿಕೆಯ ಮೂಲಕ ದೊಡ್ಡ ಹೆಸರಾದ ಎನ್. ಮರಿಶಾಮಾಚಾರ್ ಪದೇಪದೇ ತಮ್ಮ ಬಾಲ್ಯ ನೆನೆಯುತ್ತಾ, `ನಾನು ಹುಡುಗನಾಗಿದ್ದಾಗ...' ಎನ್ನುತ್ತಲೇ, `ಆ ಹುಡುಗ' ಮೊದಲ ಚಿತ್ರ ಬಿಡಿಸಿದ ತಮ್ಮದೇ ಕಥೆಯನ್ನು ಬೇರೆ ಹುಡುಗನ ಕಥೆ ಎಂಬಂತೆ ಬಣ್ಣಿಸುತ್ತಿದ್ದರು. ಈಗ ಆ ಕಥೆ ಹೇಳಿಕೊಳ್ಳಲು ಅವರೇ ಇಲ್ಲ.

ಮೇ 15, 1951ರಲ್ಲಿ ವಿಜಯಪುರದಲ್ಲಿ ಹುಟ್ಟಿದ ಮರಿಶಾಮಾಚಾರ್, ಜಯನಗರದ ಆರ್‌ವಿ ಹೈಸ್ಕೂಲಿನಲ್ಲಿ ಓದುವಾಗಲೇ ಏನಾದರೂ ಕಾರ್ಯಕ್ರಮ ಆದರೆ ಮೇಷ್ಟರು, ಮೇಡಂಗಳು ಇವರಿಂದ ಡ್ರಾಯಿಂಗ್ ಮಾಡಿಸುತ್ತಿದ್ದರು. ಗಣಪತಿ ಹಬ್ಬ, ಕನ್ನಡ ರಾಜ್ಯೋತ್ಸವ, ಗಣ ರಾಜ್ಯೋತ್ಸವ ಸಂದರ್ಭ ಯಾವುದೇ ಆಗಲಿ ರೂಪುತಳೆಯುತ್ತಿದ್ದದ್ದು ಮರಿಶಾಮಾಚಾರ್ ಮೂಸೆಯ ಚಿತ್ರಗಳೇ. ಒಂದೊಮ್ಮೆ ಸ್ಪರ್ಧೆಯಲ್ಲಿ ಅವರು ರಚಿಸಿದ ಲ್ಯಾಂಡ್‌ಸ್ಕೇಪ್‌ಗೆ ಮೊದಲ ಬಹುಮಾನ ಸಿಕ್ಕಿತು. ಬದುಕಿನಲ್ಲಿ ಬಣ್ಣಗಳು ಮೂಡಲು ಇನ್ನೇನು ಬೇಕು?

ಅಣ್ಣ ಕೆನ್‌ಸ್ಕೂಲ್ ವಿದ್ಯಾರ್ಥಿ. ಕಲೆಯ ರುಚಿ ಹದಗೊಂಡಿದ್ದು ಅಣ್ಣನ ಸಹವಾಸದಿಂದಲೇ. ಭೌತವಿಜ್ಞಾನ ವಿಷಯ ಕೈಕೊಟ್ಟು, ಮೈಸೂರಿನಲ್ಲಿ ಪಿಯುಸಿ ಫೇಲಾದ ಮೇಲೆ ಅಣ್ಣ ಸ್ಟೆನ್‌ಸಿಲ್ ಮೇಲೆ ಮಾಡುತ್ತಿದ್ದ ಡ್ರಾಯಿಂಗ್‌ಗಳಿಗೆ ಮರಿಶಾಮಾಚಾರ್ ಇಂಡಿಯನ್ ಇಂಕ್ ಫಿಲ್ ಮಾಡುತ್ತಲೇ ರೇಖೆಗಳ ಕದಲಿಕೆಗಳನ್ನು ತಮ್ಮದಾಗಿಸಿಕೊಂಡರು. ಅನಕೃ ಕಾದಂಬರಿಗಳನ್ನು ಓದುವ ಹವ್ಯಾಸವಿದ್ದ ಅವರಿಗೆ ಕಲಾವಿದರ ಬಗ್ಗೆ ಮೊದಲು ಕೆಟ್ಟ ಅಭಿಪ್ರಾಯವಿತ್ತು. ಆಗಾಗ ಮನೆಗೆ ಬರುತ್ತಿದ್ದ ಹಡಪದ, ಆ ಅಭಿಪ್ರಾಯ ತಪ್ಪೆಂದು ಮನದಟ್ಟು ಮಾಡಿಸಿದರು. ಕೆನ್‌ಸ್ಕೂಲ್‌ಗೆ ಸೇರುವಂತೆ ಸಲಹೆ ಕೊಟ್ಟಿದ್ದೂ ಅವರೇ.

ಅಲ್ಲಿ ಐದು ವರ್ಷ ಡಿಪ್ಲೊಮಾ, ಎರಡು ವರ್ಷ ಆರ್ಟ್ ಮಾಸ್ಟರ್ ಕಲಿಕೆ. ಎರಡರಲ್ಲೂ ಕ್ರಮವಾಗಿ ಮೊದಲ ಹಾಗೂ ಎರಡನೇ ರ್‍ಯಾಂಕ್. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಡ್ರಾಯಿಂಗ್ ಮೇಷ್ಟ್ರ ಕೆಲಸ ಸಿಗಲು ಅಷ್ಟು ಸಾಕಾಯಿತು. ಅಲ್ಲಿ ಅವರು ಕೆಲಸ ಮಾಡಿದ್ದು ನಾಲ್ಕೇ ದಿನ.

1977ರಲ್ಲಿ ಕೆ.ಕೆ.ಹೆಬ್ಬಾರರು ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಹಲವಾರು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಬರೋಡಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರತಿಭಾವಂತರನ್ನು ಕಳುಹಿಸುವುದು ಕೂಡ ಅವುಗಳಲ್ಲಿ ಒಂದು. ರ್‍ಯಾಂಕ್ ವಿದ್ಯಾರ್ಥಿ ಮರಿಶಾಮಾಚಾರ್ ಹೆಬ್ಬಾರರ ಕಣ್ಣಿಗೆ ಬಿದ್ದಿದ್ದರು. ಬರೋಡಾಗೆ ಹೋಗುವಂತೆ ಅವರಿಗೆ ತಿದಿ ಒತ್ತಿದರು. ಮಾನಸಿಕ ಗುರುವೂ ಆಗಿದ್ದ ಹೆಬ್ಬಾರರ ಮಾತನ್ನು ತಳ್ಳಿಹಾಕುವುದು ಸಾಧ್ಯವಿರಲಿಲ್ಲ. ಕೈಲಿದ್ದ ಒಳ್ಳೆಯ ಸಂಬಳ ತರುವ ಡ್ರಾಯಿಂಗ್ ಮೇಷ್ಟ್ರು ಕೆಲಸ ಬಿಡುವುದು ಕಷ್ಟವಿತ್ತು. ಆದರೆ, ತಿಂಗಳಿಗೆ ರೂ. 400 ವಿದ್ಯಾರ್ಥಿವೇತನ ಎಲ್ಲರಿಗೂ ಸಿಗುತ್ತಿರಲಿಲ್ಲ. ಗುರು ತೋರಿದ ಹಾದಿಯಲ್ಲಿ ನಡೆದ ಮರಿಶಾಮಾಚಾರ್, 1978ರಲ್ಲಿ ಕೆಲಸ ಬಿಟ್ಟು ಬರೋಡಕ್ಕೆ ಹೊರಟರು.

ಹೆಬ್ಬಾರರು ಆಗಾಗ ಅಲ್ಲಿಗೆ ಹೋಗಿ, ತಮ್ಮ ನೆಚ್ಚಿನ ವಿದ್ಯಾರ್ಥಿಯ ಬಗ್ಗೆ ವಿಚಾರಿಸುತ್ತಿದ್ದರು. ಆಗ ಬೆಂಗಳೂರಿನ ಲಲಿತ ಕಲಾ ಅಕಾಡೆಮಿಯಲ್ಲಿ ಪ್ರದರ್ಶನ ಆಯೋಜಿಸುವ ಅಧಿಕಾರಿ ಬೇಕಿದ್ದರು. ಬರೋಡದಲ್ಲಿ ಕಲೆಯನ್ನು ಕಲಿಸುತ್ತಿದ್ದ ಕೆ.ಜಿ. ಸುಬ್ರಹ್ಮಣ್ಯಂ ತಕ್ಷಣಕ್ಕೆ ಸೂಚಿಸಿದ ಹೆಸರು `ಮರಿಶಾಮಾಚಾರ್'. ಕಲಾವಿದನಾಗಿ ಬೆಳೆಯಲು ಸಾಧ್ಯವಿಲ್ಲದ ಆ ಹುದ್ದೆಯ ಮೂಲಕ ಕಲೆಯನ್ನು ಬೆಳೆಸುವುದು ಸಾಧ್ಯವಿತ್ತು. ರಾಜ್ಯದ ಕಲೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಆ ಜವಾಬ್ದಾರಿಗೆ ಮರಿಶಾಮಾಚಾರ್ ಹೆಗಲು ಕೊಟ್ಟರು. ಅದಕ್ಕೆ ಅವರ ಮನಸ್ಸನ್ನು ಅಣಿಗೊಳಿಸಿದ್ದೂ ಹೆಬ್ಬಾರರೇ.

`ಕನ್‌ಫರ್ಮ್' ಆಗದ ಆ ಕೆಲಸದಲ್ಲಿ ಹದಿನಾರು ವರ್ಷ ದುಡಿದರು. 1995ರಲ್ಲಿ ಶಿಲ್ಪಕಲಾ ಅಕಾಡೆಮಿ ಶುರುವಾಯಿತು. ಅದಕ್ಕೂ ರಿಜಿಸ್ಟ್ರಾರ್ ಬೇಕಿತ್ತು. ವೀರಪ್ಪ ಮೊಯಿಲಿ ಆ ಗಾದಿಗೆ ಸೂಚಿಸಿದ್ದು ಮರಿಶಾಮಾಚಾರ್ ಅವರ ಹೆಸರನ್ನೇ. `ಕಲಾಗ್ರಾಮ'ದಂಥ ಮಹತ್ವದ ಕಲ್ಪನೆ ಸಾಕಾರಗೊಂಡಿದ್ದರಲ್ಲಿ ಮರಿಶಾಮಾಚಾರ್ ಶ್ರಮವಿತ್ತು. ಅದರ ಸಂಸ್ಥಾಪಕ ಸದಸ್ಯರಲ್ಲಿ ಅವರೂ ಒಬ್ಬರು.

ಬೆಂಗಳೂರಿನಲ್ಲಿ ಎಷ್ಟೋ ಕಲಾ ವಿದ್ಯಾರ್ಥಿಗಳು `ಕಲಾ ಚರಿತ್ರೆ'ಯಲ್ಲಿ ಫೇಲಾಗುತ್ತಿದ್ದರು. ಕನ್ನಡದಲ್ಲಿ ಕಲೆಗೆ ಸಂಬಂಧಿಸಿದ ಸಮಗ್ರ ಎನ್ನುವಂಥ ಪುಸ್ತಕಗಳೇ ಇರಲಿಲ್ಲದಿದ್ದುದೇ ಅದಕ್ಕೆ ಕಾರಣ ಎಂಬುದನ್ನು ಮರಿಶಾಮಾಚಾರ್ ಅರಿತರು. ಶಿವರಾಮ ಕಾರಂತ, ತಿಪ್ಪೇಸ್ವಾಮಿ ಬರೆದ ಬೆರಳೆಣಿಕೆಯ ಪುಸ್ತಕಗಳನ್ನು ಹೊರತುಪಡಿಸಿದರೆ ಅಕಾಡೆಮಿಕ್ ಕಲಿಕೆಗೆ ಹೊಂದುವ ಪುಸ್ತಕಗಳು ಇರಲಿಲ್ಲ.

ಬರೋಡಾದಲ್ಲಿ ಕಲಿಯುವಾಗ ಗುಜರಾತಿ ಭಾಷೆಯಲ್ಲಿ ಟಿಪ್ಪಣಿ ಕೊಡುತ್ತಿದ್ದದ್ದು ಮರಿಶಾಮಾಚಾರ್ ಅವರಿಗೆ ನೆನಪಿತ್ತು. ಖುದ್ದು ಕನ್ನಡದಲ್ಲಿ ಅಂಥವೇ ಟಿಪ್ಪಣಿಗಳನ್ನು ಅವರು ಕಲಿಯುವಾಗ ಸಿದ್ಧಪಡಿಸಿಕೊಂಡಿದ್ದರು. ಕನ್ನಡದಲ್ಲಿ `ಕಲಾ ಪದಕೋಶ' ರಚಿಸಲು ಆಗಲೇ ಅವರು ಯತ್ನಿಸಿದರು. ಆದರೆ, ಆಗ ಅದು ಆಗಲಿಲ್ಲ. ಆ ಕನಸು ನನಸಾದದ್ದು ಅಕಾಡೆಮಿಯ ಗಾದಿ ಮೇಲೆ ಕೂತ ನಂತರ.

ಹಳ್ಳಿಯಿಂದ ಬಂದ ವಿದ್ಯಾರ್ಥಿಗಳಿಗೆ ಕಲೆಯ ಅಧ್ಯಯನಕ್ಕೆ ಯೋಗ್ಯವಾದ ಅಕಾಡೆಮಿಕ್ ಪುಸ್ತಕಗಳನ್ನು ರಚಿಸಿದ್ದು ಮರಿಶಾಮಾಚಾರ್ ಮಾಡಿದ ಮಹತ್ವದ ಕೆಲಸ. ಬಹುತೇಕ ವಿದ್ಯಾರ್ಥಿಗಳಿಗೆ ಇಂದಿಗೂ ಅವೇ ಅಧ್ಯಯನ ಪರಿಕರಗಳು ಎಂಬುದು ವಿಶೇಷ.

`ನಿಮ್ಮದೇ ಶೈಲಿ ಬಳಸಿಕೊಳ್ಳಿ' ಎಂಬ ಹಡಪದ ಮೇಷ್ಟರ ಮಾತನ್ನು ಕಿವಿಗೆ ಹಾಕಿಕೊಂಡವರು ಮರಿಶಾಮಾಚಾರ್. ಪರೀಕ್ಷೆ ಸಮಯದಲ್ಲಿ ಮಂಡ್ಯದಲ್ಲಿ ಕಾಲುವೆಗೆ ಬಸ್ ಬಿದ್ದು ದುರಂತವಾಗಿತ್ತು. ಅದನ್ನೇ ವಸ್ತುವಾಗಿಟ್ಟುಕೊಂಡು ಅವರು ಚಿತ್ರ ಬರೆದರು. ಹಡಪದ ತುಂಬಾ ಮೆಚ್ಚಿದ್ದ ಆ ಚಿತ್ರವೇ ಕೆನ್ ಸ್ಕೂಲ್‌ನ ಡಿಪ್ಲೊಮಾದಲ್ಲಿ ಮೊದಲ ರ್‍ಯಾಂಕ್ ದಕ್ಕಿಸಿಕೊಟ್ಟಿದ್ದು. ಮುಂದೆ ಮಿನಿಯೇಚರ್ ಪೇಟಿಂಗ್, ತೊಗಲುಗೊಂಬೆ ಅಳವಡಿಸಿ ಚಿತ್ರಗಳನ್ನು ಬರೆಯತೊಡಗಿದ ಮರಿಶಾಮಾಚಾರ್, ಕಲಾ ಪರಿಚಾರಿಕೆಗೆ ನಿಂತ ಮೇಲೆ ಚಿತ್ರ ಬರೆಯುವುದು ಕಡಿಮೆಯಾಯಿತು.

ಅಕಾಡೆಮಿಯ ಪ್ರದರ್ಶನಾಧಿಕಾರಿಯಾಗಿ ಮರಿಶಾಮಾಚಾರ್ ಅನೇಕ ಶಿಬಿರ ಆಯೋಜಿಸಿದ್ದಿದೆ. ಎನ್.ಎಸ್.ಬೇಂದ್ರೆ ತರಹದ ಹೆಸರಾಂತ ಕಲಾವಿದ ಅವರ ಶಿಬಿರದ ಭಾಗವಾಗಿದ್ದರು. ಆಗ ಒಂದು ಕ್ಯಾಂಪ್‌ನಲ್ಲಿ ಬೇಂದ್ರೆಯವರ ಪೇಂಟಿಂಗ್ ಕೇವಲ ರೂ.2000ಕ್ಕೆ ಬಿಕರಿಯಾಗಿತ್ತು. ಈಗ ಅವರ ಪೇಟಿಂಗ್‌ಗಳು ಒಂದು ಕೋಟಿಗೆ ಹೋಗುತ್ತವೆ.

ಗಟ್ಟಿ ಕೃತಿಕಾರರು: `ಚಿತ್ರಕಲಾ ಪ್ರಪಂಚ', `ಶಿಲ್ಪಕಲಾ ಪ್ರಪಂಚ', `ಕಲಾಕೋಶ' ಸಂಪುಟಗಳು ಮರಿಶಾಮಾಚಾರ್ ಕೃತಿಕಾರರಾಗಿ ಗಟ್ಟಿಗರೆಂಬುದಕ್ಕೆ ಉದಾಹರಣೆಗಳು. ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಆದಾಗ ಮರಿಶಾಮಾಚಾರ್ ಹಳ್ಳಿಯ ಶಿಲ್ಪಿಗಳನ್ನು ಕರೆದು ಕ್ಯಾಂಪ್ ಮಾಡಿ, ಅವರೊಟ್ಟಿಗೆ ವಿಚಾರ ವಿನಿಮಯ ನಡೆಸಲು ಅನುವು ಮಾಡಿಕೊಟ್ಟಿದ್ದು ಇನ್ನೊಂದು ಸಾಧನೆ.

ಯಾಕೆಂದರೆ, ಹಳ್ಳಿಯ ಶಿಲ್ಪ ಕಲಾವಿದರು ಮಾತಾಡುವ ಪೈಕಿಯಲ್ಲ. ಅಖಿಲ ಭಾರತ ಶಿಲ್ಪಕಲಾ ಶಿಬಿರಗಳು, ಮಿನಿಯೇಚರ್ ಶಿಬಿರಗಳು, ಸಣ್ಣ ಸಣ್ಣ ಶಿಲ್ಪಗಳನ್ನು ಮಾಡುವ ಮೂಲಕ ಮಾರುಕಟ್ಟೆ ದಕ್ಕಿಸಿಕೊಳ್ಳುವುದು ಇವೇ ಮೊದಲಾದ ಕೆಲಸಗಳನ್ನು ಶಿಲ್ಪಕಲಾ ಅಕಾಡೆಮಿಯ ಮೂಲಕ ಮರಿಶಾಮಾಚಾರ್ ಮಾಡಿದರು. ಶಿಲ್ಪ ಕಲಾವಿದರ ಮಾಲೆಯನ್ನು ಪ್ರಕಟಿಸಿದ್ದಲ್ಲದೆ, ರವಿವರ್ಮನಿಗೆ ಸಮನಾಗಿದ್ದ ಮೈಸೂರಿನ ಶಿಲ್ಪಿ ಸಿದ್ದಲಿಂಗ ಸ್ವಾಮಿಗಳ ಕುರಿತ ಕೃತಿಯನ್ನು ಸಂಪಾದಿಸಿದ್ದು ಇನ್ನೊಂದು ಮಹತ್ತರ ಕೆಲಸ.

ಹೆಬ್ಬಾರರ ಜೊತೆಗೆ ತಾವು ಕಳೆದ ಅಮೂಲ್ಯ ಕ್ಷಣಗನ್ನೂ ಬರಹ ರೂಪಕ್ಕೆ ಇಳಿಸಿರುವ ಅವರು ಚಿತ್ರ ಬರೆದದ್ದು ಕಡಿಮೆಯಾದರೂ ಬರವಣಿಗೆಯ ಮೂಲಕ ನೆನಪಿನ ಚಿತ್ರಶಾಲೆಯನ್ನಂತೂ ಉಳಿಸಿದ್ದಾರೆ. ಇವರ ಗರಡಿಯಲ್ಲಿ ಪಳಗಿ, ಇವರು ಬರೆದ ಕೃತಿಗಳನ್ನು ಓದಿಕೊಂಡ ಅನೇಕ ಕಲಾವಿದರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಿದೆ.

`ಚಿತ್ರಸಂತೆ', ಕಲೆಯ ಕುರಿತು ತಪ್ಪು ಕಲ್ಪನೆ ಮೂಡಲು ಕಾರಣವಾಗುತ್ತಿದೆ ಎಂದು ಪ್ರತಿಪಾದಿಸುತ್ತಿದ್ದ ಮರಿಶಾಮಾಚಾರ್, ಹವ್ಯಾಸಿಗಳಿಗಿಂತ ವೃತ್ತಿಪರರ ಕೃತಿಗಳ ಪ್ರದರ್ಶನ ಹೆಚ್ಚಾಗಿ ನಡೆಯಬೇಕು ಎಂದು ಹೇಳುತ್ತಿದ್ದರು.

ಮನುಷ್ಯ ಮನುಷ್ಯನನ್ನು ತುಳಿಯುವ ಪ್ರಕ್ರಿಯೆನ್ನು ತೆರಿಗ್ರಾಫ್ ಮೂಲಕ ಹೋರಾಟವನ್ನಾಗಿ ಚಿತ್ರಿಸಿದ್ದು, ಎಚಿಂಗ್ ಮೂಲಕ ಜೆಂಕ್‌ಶೀಟ್‌ನಲ್ಲಿ ಬರಗಾಲದ ಚಿತ್ರ ಮೂಡಿಸಿದ್ದು, ಮುಂಬೈ ಮೇಲೆ ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಡಿಜಿಟಲ್ ಕಲಾಕೃತಿಯನ್ನು ರಚಿಸಿದ್ದು ಆಗಾಗ ಅವರೊಳಗಿನ ಕಲಾವಿದ ಜೀವತಳೆಯುತ್ತಿದ್ದುದಕ್ಕೆ ಉದಾಹರಣೆಗಳು. ತಾವು ಮೆಚ್ಚಿದ ಕೆ.ಕೆ. ಹೆಬ್ಬಾರ್, ಆರ್.ಎಂ. ಹಡಪದ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರಿಗೆ 2007ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸುವರ್ಣ ಕರ್ನಾಟಕ ಪ್ರಶಸ್ತಿಯೂ ಸಂದಿತ್ತು.

ಅವರನ್ನು ಹತ್ತಿರದವರು ಪ್ರೀತಿಯಿಂದ `ಮರಿ' ಎನ್ನುತ್ತಿದ್ದರು. ಅನೇಕರ ಪಾಲಿಗೆ ಅವರು `ಮೇಷ್ಟ್ರೇ' ಆಗಿದ್ದರು. ಕರ್ನಾಟಕದ ಕಲಾವಲಯದಲ್ಲಿ `ಮರಿ' ಅವರದು ಹಿರಿ ಹೆಜ್ಜೆ.

ಮರಿಶಾಮಾಚಾರ್ ಇನ್ನಿಲ್ಲ
ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್, ಕಲಾ ಸಾಹಿತಿ ಎನ್.ಮರಿಶಾಮಾಚಾರ್ (62) ಅವರು ಬುಧವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಪತ್ನಿ ಮತ್ತು ಮೂವರು ಪುತ್ರಿಯರು ಇದ್ದಾರೆ. ವಿಲ್ಸನ್ ಗಾರ್ಡನ್‌ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ಜರುಗಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ 1951ರಲ್ಲಿ ಹುಟ್ಟಿದ ಮರಿಶಾಮಾಚಾರ್, ಕೆನ್ ಕಲಾ ಶಾಲೆಯಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡಿದರು. ಬಳಿಕ ಬರೋಡದಲ್ಲಿ ಉನ್ನತ ಕಲಾ ಶಿಕ್ಷಣ ಪಡೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಪ್ರದರ್ಶನ ಅಧಿಕಾರಿಯಾಗಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕೇಂದ್ರ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅವರು, ವಿವಿಧ ಕಲಾ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕ ಲಲಿತಕಲಾ ಅಕಾಡೆಮಿ, ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಅವರು, `ನಡೆದಾಡುವ ಕಲಾಕೋಶ'ವೆಂದೇ ಕಲಾ ವಲಯದಲ್ಲಿ ಪ್ರಸಿದ್ಧರಾಗಿದ್ದರು.

`ದೃಶ್ಯಕಲಾ', `ಸಮಕಾಲೀನ ಕಲೆ', `ಭಾರತದ ದೃಶ್ಯ ಕಲಾವಿದರು', `ಕಲಾ ಸಾಧಕ', ಕೆ.ಕೆ.ಹೆಬ್ಬಾರ್ ಅವರನ್ನು ಕುರಿತ `ಹಾಡುವ ರೇಖೆ' ಸೇರಿದಂತೆ ಹತ್ತಾರು ಕೃತಿಗಳನ್ನು ಅವರು ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.