ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಕ್ಷುಬ್ಧ ನೈಋತ್ಯ ಬಲೂಚಿಸ್ತಾನ ಪ್ರಾಂತ್ಯದ ಕೆಚ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಚೆಕ್ ಪೋಸ್ಟ್ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 10 ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಜನವರಿ 25-26ರ ರಾತ್ರಿ ಉಗ್ರರಿಂದ ದಾಳಿ ನಡೆದಿದೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‌ಪಿಆರ್) ಪ್ರಕಟಣೆಯಲ್ಲಿ ತಿಳಿಸಿದೆ.
ತೀವ್ರ ಗುಂಡಿನ ಕಾಳಗದಲ್ಲಿ 10 ಮಂದಿ ಸೈನಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಉಗ್ರ ಹತ್ಯೆಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ. ಈ ವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿ ಹಿಂದಿನ ಹೊಣೆ ಹೊತ್ತುಕೊಂಡಿಲ್ಲ ಎಂದು ಹೇಳಿದೆ.
ಇರಾನ್ ಹಾಗೂ ಅಫ್ಗಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನದಲ್ಲಿದೀರ್ಘ ಕಾಲದಿಂದ ಪ್ರಕ್ಷುಬ್ಧಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಗುರಿಯಾಗಿರಿಸಿಕೊಂಡು ಬಲೂಚಿಸ್ತಾನದ ಬಂಡಾಯ ಗುಂಪುಗಳು ಹಲವಾರು ದಾಳಿಗಳನ್ನು ನಡೆಸಿದ್ದವು.