ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಜೀನಿಯಾ: ನೌಕರನ ಗುಂಡಿಗೆ 12 ಮಂದಿ ಸಾವು

ಸಹೋದ್ಯೋಗಿಗಳ ಮೇಲೆ ದಾಳಿ * ಪೊಲೀಸ್‌ ಸೇರಿ ಆರು ಮಂದಿಗೆ ಗಾಯ
Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವರ್ಜೀನಿಯಾದ ತೀರ ಪ್ರದೇಶ ಬಳಿಯ ಸರ್ಕಾರಿ ಕಟ್ಟಡ ಸಮುಚ್ಛಯದಲ್ಲಿ ಸರ್ಕಾರಿ ನೌಕರನೊಬ್ಬ ಸಹೋದ್ಯೋಗಿಗಳ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿ 12 ಜನರನ್ನು ಕೊಂದಿದ್ದಾನೆ. ಈ ವೇಳೆ ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ವಿಷಯ ಗೊತ್ತಾದ ಕೂಡಲೇ ಅಲ್ಲಿದ್ದ ಪೊಲೀಸರು ಪ್ರತಿದಾಳಿ ನಡೆಸಿ, ಬಂದೂಕುಧಾರಿಯನ್ನು ಕೊಂದಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಪೊಲೀಸ್‌ ಅಧಿಕಾರಿಗೂ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ ಮುಖ್ಯಸ್ಥ ಜೇಮ್ಸ್‌ ಸರ್ವೆರಾ ತಿಳಿಸಿದ್ದಾರೆ.

‘ವರ್ಜೀನಿಯಾ ಇತಿಹಾಸದಲ್ಲಿ ಇದೊಂದು ಕರಾಳ ದಿನ. ಇಲ್ಲಿನ ಜನರು ನಮ್ಮ ಸ್ನೇಹಿತರು, ಸಹ ಕೆಲಸಗಾರರು, ನೆರೆಯವರು, ಸಹೋದ್ಯೋಗಿಗಳಾಗಿದ್ದಾರೆ’ ಎಂದು ಇಲ್ಲಿನ ಮೇಯರ್ ಬಾಬಿ ಡಯರ್ ತಿಳಿಸಿದ್ದಾರೆ.

‘ಗುಂಡಿನ ದಾಳಿ ನಡೆಸಿದ ನೌಕರ ಬೇಸರಗೊಂಡಿದ್ದ’ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ದಾಳಿ ಸ್ಥಳದಲ್ಲಿ ಹಲವು ಸರ್ಕಾರಿ ಕಚೇರಿಗಳಿದ್ದು, ಸದಾ ಸಿಬ್ಬಂದಿ ಮತ್ತು ಸಾರ್ವಜನಿಕರಿಂದ ತುಂಬಿರುತ್ತವೆ.

‘ಈ ಘಟನೆ ಕುರಿತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ವಿವರಿಸಲಾಗಿದೆ. ಅವರು ಈ ಸಂಬಂಧ ಮೇಲ್ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಶ್ವೇತಭವನ ತಿಳಿಸಿದೆ. ಈ ಪ್ರಕರಣದ ತನಿಖೆಗೆ ವರ್ಜೀನಿಯಾ ಪೊಲೀಸರಿಗೆ ಎಫ್‌ಬಿಐ ಸಹಕರಿಸುತ್ತಿದೆ.

ಹಿಂದಿನ ಗುಂಡಿನ ದಾಳಿ ಪ್ರಕರಣಗಳು
* 2018 ಫೆಬ್ರುವರಿ 14: ಫ್ಲಾರಿಡಾದ ಪಾರ್ಕ್‌ಲೆಂಡ್‌ ಶಾಲೆಯಲ್ಲಿ 19 ವರ್ಷದ ಹಳೆ ವಿದ್ಯಾರ್ಥಿ ನಡೆಸಿದ ಗುಂಡಿನ ದಾಳಿಗೆ 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿ ಕೊಲೆಯಾಗಿದ್ದರು.

* 2018 ಮೇ 18: ಟೆಕ್ಸಾಸ್‌ನ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಬಂದೂಕನ್ನು ಶಾಲೆಗೆ ತಂದು ಸಹಪಾಠಿಗಳ ಮೇಲೆ ಗುಂಡು ಹಾರಿಸಿದ್ದ. ಈ ಘಟನೆಯಲ್ಲಿ 8 ವಿದ್ಯಾರ್ಥಿಗಳೂ ಸೇರಿದಂತೆ 10 ಜನರು ಸಾವಿಗೀಡಾಗಿದ್ದರು.

* 2018 ನವೆಂಬರ್‌ 7: ಕ್ಯಾಲಿಫೋರ್ನಿಯಾದ ಸಂಗೀತ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆಸಿದ 28 ವರ್ಷದ ಯೋಧ, 12 ಜನರ ಸಾವು.

* 2017ರ ಅಕ್ಟೋಬರ್‌ 1: ನಿವೃತ್ತ ಲೆಕ್ಕಾಧಿಕಾರಿ ನಡೆಸಿದ ಗುಂಡಿನ ದಾಳಿಗೆ 58 ಜನ ಸತ್ತು, 550 ಜನರು ಗಾಯಗೊಂಡಿದ್ದರು.

* 2016ರ ಜೂನ್‌ 12: ಬಂದೂಕುಧಾರಿಯ ದಾಳಿಗೆ 49 ಜನ ಕೊಲೆಯಾಗಿದ್ದರು.

* 2012 ಜುಲೈ: ಕೊಲರಾಡೊದ ಅರೋರಾದಲ್ಲಿ ರಾತ್ರಿ ಚಿತ್ರಮಂದಿರದೊಳಗೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ 12 ಜನ ಸತ್ತಿದ್ದರು. 70 ಮಂದಿ ಗಾಯಗೊಂಡಿದ್ದರು.

* 2012 ಡಿಸೆಂಬರ್‌: ನ್ಯೂಟೌನ್‌ ಶಾಲೆಯೊಂದರಲ್ಲಿ 20 ವರ್ಷದ ಯುವಕ ನಡೆಸಿದ ಗುಂಡಿನ ದಾಳಿಗೆ 20 ಮಕ್ಕಳು
ಹತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT