ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ | ಧರ್ಮ ಗ್ರಂಥ ಅಪವಿತ್ರಗೊಳಿಸಿದ ಆರೋಪ: ಕ್ರಿಶ್ಚಿಯನ್ನರ ಮೇಲೆ ದಾಳಿ

Published 27 ಮೇ 2024, 4:35 IST
Last Updated 27 ಮೇ 2024, 4:35 IST
ಅಕ್ಷರ ಗಾತ್ರ

ಲಾಹೋರ್: ಧರ್ಮ ಗ್ರಂಥವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಆಕ್ರೋಶಿತ ಗುಂಪೊಂದು ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಹಾಗೂ ‌ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ಪ್ರಕರಣ ಸಂಬಂಧ 450ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 25 ಜನರನ್ನು ಬಂಧಿಸಲಾಗಿದೆ.

'ಲಾಹೋರ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಸರ್ಗೋಧಾ ಜಿಲ್ಲೆಯ ಮುಜಾಹಿದ್ ಕಾಲೋನಿಯಲ್ಲಿ ತೀವ್ರಗಾಮಿ ಇಸ್ಲಾಮಿಸ್ಟ್ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಕಾರ್ಯಕರ್ತರ ನೇತೃತ್ವದ ಆಕ್ರೋಶಿತ ಗುಂಪು ಶನಿವಾರ ಕ್ರಿಶ್ಚಿಯನ್ ಸಮುದಾಯದ ಸದಸ್ಯರ ಮೇಲೆ ದಾಳಿ ಮಾಡಿದೆ. ಘಟನೆಯಲ್ಲಿ ಇಬ್ಬರು ಕ್ರಿಶ್ಚಿಯನ್ನರು ಮತ್ತು 10 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ನರ ಮನೆ ಹಾಗೂ ಆಸ್ತಿಗಳಿಗೂ ಹಾನಿಯುಂಟಾಗಿದೆ' ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಸಮುದಾಯದ ನಜೀರ್ ಮಸಿಹ್ ಎಂಬ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಗಲಾಟೆ ವೇಳೆ ಉದ್ರಿಕ್ತರ ಗುಂಪು ಕ್ರಿಶ್ಚಿಯನ್ ವ್ಯಕ್ತಿಯ ಮನೆ ಹಾಗೂ ಶೂ ಫ್ಯಾಕ್ಟರಿಗೆ ಬೆಂಕಿ ಹಚ್ಚಿದ್ದು, ಶೂ ಫ್ಯಾಕ್ಟರಿ ಸುಟ್ಟು ಭಸ್ಮವಾಗಿದೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆಗ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಅಧಿಕಾರಿಗಳು ಸೇರಿದಂತೆ ಕನಿಷ್ಠ 10 ಪೊಲೀಸರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸದ್ಯ ‌ನಗರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಕ್ರಿಶ್ಚಿಯನ್ ವ್ಯಕ್ತಿ ನಜೀರ್ ಅವರನ್ನು ಚಿಕಿತ್ಸೆಗಾಗಿ ಸರ್ಗೋಧಾ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿರುವುದು ಕಂಡುಬಂದಲ್ಲಿ ನಜೀರ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ .

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಗೋಧಾ ಮುಜಾಹಿದ್ ಕಾಲೋನಿಯಲ್ಲಿ ಪ್ರಸ್ತುತ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT