ಢಾಕಾ/ಪ್ಯಾರಿಸ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಆರ್ಥಿಕ ತಜ್ಞ ಮೊಹಮ್ಮದ್ ಯೂನಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ರಾತ್ರಿ ನೇಮಕ ಮಾಡಿದ್ದಾರೆ ಎಂದು ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.
ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ವಿದ್ಯಾರ್ಥಿ ಆಂದೋಲನದ ಸಂಯೋಜಕರೊಂದಿಗೆ ಶಹಾಬುದ್ದೀನ್ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಧ್ಯಂತರ ಸರ್ಕಾರದಲ್ಲಿ ಯಾರೆಲ್ಲ ಇರಬೇಕೆಂಬುದನ್ನು ಅಂತಿಮಗೊಳಿಸ ಲಾಗುವುದು ಎಂದು ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.
ಯೂನಸ್ ಅವರು ಸದ್ಯ ದೇಶದಿಂದ ಹೊರಗಿದ್ದಾರೆ. ಆದರೆ, ಶೇಖ್ ಹಸೀನಾ ಅವರ ಆಡಳಿತದ ಪದಚ್ಯುತಿಯನ್ನು ಯೂನಸ್ ಸ್ವಾಗತಿಸಿದ್ದಾರೆ. ದೇಶದಲ್ಲಿ ಈಗ ಆಗಿರುವ ಬೆಳವಣಿಗೆಯನ್ನು ಅವರು ದೇಶದ ‘ಎರಡನೇ ವಿಮೋಚನೆ’ ಎಂದು ಬಣ್ಣಿಸಿದರು.
ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ‘ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ’ ಸಂಘಟನೆ ಒತ್ತಾಯಿಸಿದಾಗ, ಯೂನಸ್ ಅದಕ್ಕೆ ಸಮ್ಮತಿಸಿದರು.
‘ಪ್ರತಿಭಟನೆ ನಡೆಸುತ್ತಿರುವವರು ನನ್ನಲ್ಲಿ ಇಟ್ಟಿರುವ ನಂಬಿಕೆ ನನಗೆ ಗೌರವ ತರುವ ವಿಚಾರ. ಮಧ್ಯಂತರ ಸರ್ಕಾರ ಆರಂಭ ಮಾತ್ರ. ಮುಕ್ತ ಚುನಾವಣೆಗಳಿಂದ ಮಾತ್ರ ಶಾಶ್ವತ ಶಾಂತಿ ನೆಲೆಸಲು ಸಾಧ್ಯ. ಚುನಾವಣೆಗಳಿಲ್ಲದೇ ಬದಲಾವಣೆ ಸಾಧ್ಯವಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪದಚ್ಯುತ ಸಚಿವರ ಬಂಧನ:
ಶೇಖ್ ಹಸೀನಾ ಅವರು ದೇಶ ತೊರೆದ ಬೆನ್ನಲ್ಲೇ, ದೇಶದಿಂದ ಪಲಾಯನ ಮಾಡಲು ಯತ್ನಿಸುತ್ತಿದ್ದ ಪದಚ್ಯುತ ವಿದೇಶಾಂಗ ಸಚಿವ ಹಸನ್ ಮಹಮೂದ್ ಮತ್ತು ಮಾಜಿ ರಾಜ್ಯ ಸಚಿವ ಜುನೈದ್ ಅಹ್ಮದ್ ಪಾಲಕ್ ಅವರನ್ನು ಮಂಗಳವಾರ ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.
ಮಹಮೂದ್ ಅವರು ಢಾಕಾದ ಹಜರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೆಹಲಿ ಮಾರ್ಗದ ವಿಮಾನವೇರಲು ತೆರಳಿದ್ದರು ಎಂದು ಏರ್‌ಪೋರ್ಟ್ ಏವಿಯೇಷನ್ ಸೆಕ್ಯುರಿಟಿ (ಎವಿಎಸ್‌ಇಸಿ) ಅಧಿಕಾರಿಯೊಬ್ಬರು ಹೇಳಿರುವುದಾಗಿ ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಹಮೂದ್ ಈ ಹಿಂದೆ ಬಂದರಿನ ಮೂಲಕ ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದ್ದರು. ಆದರೆ ಗಡಿ ದಾಟಲು ಅವರಿಗೆ ಅವಕಾಶ ನೀಡಿರಲಿಲ್ಲ.
ಅಂಚೆ, ದೂರಸಂಪರ್ಕ ಮತ್ತು ಐಸಿಟಿಯ ಮಾಜಿ ರಾಜ್ಯ ಸಚಿವ ಜುನೈದ್ ಅಹ್ಮದ್ ಪಾಲಕ್ ಅವರ ಮೇಲೆ ದೇಶ ತೊರೆಯದಂತೆ ನಿರ್ಬಂಧ ಹೇರಿದ ಕೆಲವು ತಾಸುಗಳಲ್ಲಿ ಅವರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.