ನವದೆಹಲಿ: ಮೀಸಲಾತಿ ದಂಗೆಗೆ ಬೆಚ್ಚಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಹುದ್ದೆಗೆ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ.
ಹಸೀನಾ ಬ್ರಿಟನ್‌ನಲ್ಲಿ ಆಶ್ರಯ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಬ್ರಿಟನ್‌ನಲ್ಲಿ ಆಶ್ರಯಕ್ಕೆ ಇನ್ನೂ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಹಸೀನಾ ಅವರಿಗೆ ಭಾರತದಲ್ಲಿ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ ಎಂದು ವರದಿಯಾಗಿದೆ.
ಸದ್ಯಕ್ಕೆ, ಬಾಂಗ್ಲಾದೇಶದ ಮಾಜಿ ಪ್ರಧಾನಿಗೆ ಆಶ್ರಯ ನೀಡುವ ಬಗ್ಗೆ ಬ್ರಿಟನ್ ಸರ್ಕಾರದಿಂದ ಯಾವುದೇ ದೃಢೀಕರಣ ನೀಡಿಲ್ಲ. ಹೀಗಾಗಿ ಬ್ರಿಟನ್‌ನಲ್ಲಿ ಆಶ್ರಯ ಸಿಗುವವರೆಗೆ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದು ಭಾರತ ಹೇಳಿರುವುದಾಗಿ ಡೈಲಿ ಸನ್ ವರದಿ ತಿಳಿಸಿದೆ.
ಹಸೀನಾ ಸಹೋದರಿ ಬ್ರಿಟನ್ ಪ್ರಜೆಯಾಗಿದ್ದು, ಅವರೊಂದಿಗೆ ವಾಸವಿರಲು ಯೋಜಿಸಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ಢಾಕಾದಲ್ಲಿನ ಬೆಳವಣಿಗೆಗಳನ್ನು ಭಾರತ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮಧ್ಯಂತರ ಸರ್ಕಾರವು ಬಾಂಗ್ಲಾದೇಶದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬಾಂಗ್ಲಾ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಜಮಾನ್ ಘೋಷಿಸಿದ್ದಾರೆ.