ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಕೈದಿ ಗಡಿಪಾರಿಗೆ ಗಡುವು

Last Updated 14 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌/ ಪೆಶಾವರ: ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿದ ಆರೋಪದ ಮೇಲೆ ಮೂರು ವರ್ಷದ ಜೈಲು ಶಿಕ್ಷೆಗೆ ಗುರಿಯಾಗಿ, ಶನಿವಾರ ಶಿಕ್ಷೆ ಪೂರ್ಣಗೊಳಿಸಲಿರುವ ಭಾರತೀಯ ನಾಗರಿಕ ಹಮೀದ್‌ ನಿಹಾಲ್‌ ಅನ್ಸಾರಿ ಅವರನ್ನು ಸರ್ಕಾರ ಒಂದು ತಿಂಗಳೊಳಗೆ ತಾಯ್ನಾಡಿಗೆ ಗಡಿಪಾರು ಮಾಡುವಂತೆ ಇಲ್ಲಿನ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಮುಂಬೈ ನಿವಾಸಿಯಾದ 33ರ ಹರೆಯದ ಅನ್ಸಾರಿ, ನಕಲಿ ಗುರುತಿನ ಚೀಟಿಯ ಮೇಲೆ ಅಫ್ಗಾನಿಸ್ಥಾನದ ಮೂಲಕ ಪಾಕಿಸ್ತಾನಕ್ಕೆ ಅಕ್ರಮವಾಗಿ ನುಸುಳಿ ಬಂದಿದ್ದರು ಎಂಬ ಕಾರಣಕ್ಕೆ 2012ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಆನ್‌ಲೈನ್‌ನಲ್ಲಿ ಪರಿಚಿತಳಾಗಿದ್ದ ಗೆಳತಿಯನ್ನು ಭೇಟಿ ಮಾಡುವ ಸಲುವಾಗಿ ಅವರು ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಸೇನಾ ನ್ಯಾಯಾಲಯ ವಿಚಾರಣೆ ನಡೆಸಿ, 2015ರ ಡಿಸೆಂಬರ್‌ 15ರಂದು ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು.

ಅನ್ಸಾರಿ ಬಿಡುಗಡೆಯಾಗುವ ಸಮಯ ಸನ್ನಿಹಿತವಾಗಿದ್ದರೂ ಆಂತರಿಕ ಸಚಿವಾಲಯ ಮತ್ತು ಅವರನ್ನು ಇರಿಸಿರುವ ಪೆಶಾವರದ ಜೈಲು ಅಧಿಕಾರಿಗಳು ಬಿಡುಗಡೆಗೆ ಪೂರಕವಾದ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಅವರ ವಕೀಲರು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರು. ಆಗ, ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕವೂ ಕೈದಿಯನ್ನು ಜೈಲಿನಲ್ಲೇ ಹೇಗೆ ಇರಿಸಿಕೊಳ್ಳಲು ಸಾಧ್ಯ ಎಂದು ಹೆಚ್ಚುವರಿ ಅಟಾರ್ನಿ ಜನರಲ್‌ ಅವರನ್ನು ನ್ಯಾಯಮೂರ್ತಿ ಖಲಂದರ್ ಅಲಿ ಖಾನ್‌ ಪ್ರಶ್ನಿಸಿದರು.

ಬಿಡುಗಡೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಪೂರೈಸುವ ಸಲುವಾಗಿ ಒಂದು ತಿಂಗಳ ಕಾಲ ಕೈದಿಯನ್ನು ಇರಿಸಿಕೊಳ್ಳಲು ಅವಕಾಶವಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿ ಮಾಹಿತಿ ನೀಡಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ, ಹಮೀದ್‌ ಬಿಡುಗಡೆ ಮತ್ತು ಗಡಿಪಾರಿಗೆ ಪೂರಕವಾದ ಎಲ್ಲ ಪ್ರಕ್ರಿಯೆಗಳನ್ನೂ ಒಂದು ತಿಂಗಳೊಳಗೇ ಪೂರೈಸುವಂತೆ ಸೂಚಿಸಿದರು.

ಜಾಧವ್‌ ಹೆಸರು ಉಲ್ಲೇಖದ ಸಂದರ್ಶನ ಭಾಗಕ್ಕೆ ಕತ್ತರಿ: ಬಿಬಿಸಿ ಸಮರ್ಥನೆ

ಪಾಕಿಸ್ತಾನದ ಹಣಕಾಸು ಸಚಿವ ಅಸಾದ್‌ ಉಮರ್‌ ಅವರು, ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಗೂಢಚಾರ ಕುಲಭೂಷಣ್‌ ಜಾಧವ್‌ ಪ್ರಕರಣವನ್ನು ಬಿಬಿಸಿ ಸಂದರ್ಶನದಲ್ಲಿ ಉಲ್ಲೇಖಿಸಿದ್ದು, ಅದನ್ನು ಪ್ರಸಾರದ ವೇಳೆ ಕೈಬಿಟ್ಟಿರುವುದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಬಿಸಿ, ಆ ಸಂದರ್ಶನ ಯಾವುದೇ ರೀತಿಯ ‘ಸೆನ್ಸಾರ್‌ಶಿಪ್‌ಗೆ ಒಳಗಾಗಿಲ್ಲ’ ಎಂದು ಹೇಳಿದೆ.

ಬಿಬಿಸಿಯ ಪ್ರತಿನಿಧಿ ಸ್ಟೀಫನ್‌ ಸ್ಯಾಕುರ್‌ ನಡೆಸಿದ ‘ಹಾರ್ಡ್‌ ಟಾಕ್‌’ ಸಂದರ್ಶನದಲ್ಲಿ, ಪಾಕಿಸ್ತಾನದ ಆರ್ಥಿಕತೆ, ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಸೇರಿದಂತೆ ಹಲವು ಸಂಗತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದರು.

‘ಸಚಿವ ಅ‌ಸಾದ್‌ ಅವರು ಜಾಧವ್‌ ಹೆಸರು ಉಲ್ಲೇಖಿಸಿರುವ ಭಾಗವನ್ನು ತೆಗೆದುಹಾಕುವ ಮೂಲಕ ಬಿಬಿಸಿ ಪ್ರಸಾರಕರು ವಿಶಿಷ್ಟ ಬಗೆಯ ಪಕ್ಷಪಾತ ಮಾಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು’ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವೆ ಶಿರಿನ್ ಮಜರಿ ಟ್ವೀಟ್‌ ಮೂಲಕ ಟೀಕಾಪ್ರಹಾರ ನಡೆಸಿದ್ದರು.

ಸಂದರ್ಶನ ಸುದೀರ್ಘ ಅವಧಿಯದ್ದಾಗಿದ್ದರಿಂದ, ಪ್ರಸಾರದ ಸಮಯಕ್ಕೆ ಹೊಂದಿಸುವ ಸಲುವಾಗಿ ಅದನ್ನು ನಮ್ಮ ಟಿ.ವಿ ಅವತರಣಿಕೆಯಲ್ಲಿ ಕೈಬಿಡಲಾಗಿದೆಯಷ್ಟೆ. ರೇಡಿಯೊ ಸಂದರ್ಶನದಲ್ಲಿ ಅದನ್ನು ಕೈಬಿಟ್ಟಿಲ್ಲ. ಆದರೆ, ಟಿ.ವಿ ಯಲ್ಲಿ ಆ ಭಾಗವನ್ನು ಸೇರಿಸಿ ಮರು ಪ್ರಸಾರ ಮಾಡಲು ನಾವು ಸಿದ್ಧರಿದ್ದೇವೆ ಎಂದು ಬಿಬಿಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT