ಲಾಹೋರ್: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ಮಾಡಿದ ಶಹೀದ್ ರಾಜಗುರು ಅವರ 116ನೇ ಜನ್ಮದಿನವನ್ನು ಪಾಕಿಸ್ತಾನದ ಭಗತ್‌ಸಿಂಗ್ ಸ್ಮಾರಕ ಪ್ರತಿಷ್ಠಾನವು ಶನಿವಾರ ಆಚರಿಸಿತು.
ಲಾಹೋರ್ ಹೈಕೋರ್ಟ್ ಆವರಣದಲ್ಲಿರುವ ಜಿನ್ನಾ ಸಭಾಂಗಣದಲ್ಲಿ ಕೇಕ್ ಕತ್ತರಿಸುವ ಮೂಲಕ ಪ್ರತಿಷ್ಠಾನದ ಸದಸ್ಯರು, ವಕೀಲರು, ಹೋರಾಟಗಾರರು ರಾಜಗುರು ಅವರ ಜನ್ಮದಿನ ಆಚರಿಸಿದರು. ಹುತಾತ್ಮರಾದ ರಾಜಗುರು, ಭಗತ್ ಸಿಂಗ್ ಹಾಗೂ ಸುಖದೇವ್ ಅವರ ಬಲಿದಾನವನ್ನು ನೆನೆದರು.
ಸ್ವಾತಂತ್ರ್ಯಕ್ಕಾಗಿ ತೀವ್ರ ಹೋರಾಟ ನಡೆಸಿದ ಈ ಮೂವರನ್ನು 1931ರ ಮಾರ್ಚ್ 23ರಂದು ಬ್ರಿಟಿಷ್ ಅಧಿಕಾರಿಗಳು ಗಲ್ಲಿಗೇರಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಷ್ಠಾನದ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ, ‘ರಾಜಗುರು ಅವರು ಶತಮಾನಕ್ಕೊಮ್ಮೆ ಜನಿಸುವ ಅಪರೂಪದ ವ್ಯಕ್ತಿ. ಉಪಖಂಡದ ಜನರಿಗೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಇವರ ಕಾರ್ಯ ಸದಾ ಸ್ಮರಣೀಯ’ ಎಂದರು.
‘ಬ್ರಿಟಿಷರು ಹೆಣೆದ ಸುಳ್ಳು ಪ್ರಕರಣದಲ್ಲಿ ಈ ಮೂವರು ವೀರರು ಬಲಿಯಾಗಬೇಕಾಯಿತು. ದೇಶದ ಪ್ರತಿಯೊಬ್ಬರಿಗೂ ಬೆಳಕಾಗಿದ್ದ ಇವರನ್ನು ಗುರುತಿಸುವ ಕೆಲಸವನ್ನು ಪಾಕಿಸ್ತಾನ ಸರ್ಕಾರ ಮಾಡಬೇಕು’ ಎಂದು ವಕೀಲ ಮಿಯಾ ಗುಲಾಮುಲ್ಲಾ ಜೋಯಾ ಒತ್ತಾಯಿಸಿದರು.
ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಅವರನ್ನು ಉಪಖಂಡದ ಹಿಂದೂ, ಮುಸ್ಲಿಂ ಹಾಗೂ ಸಿಖ್ ಸಮುದಾಯದ ಪ್ರತಿಯೊಬ್ಬರೂ ಗೌರವಿಸುತ್ತಾರೆ. ಪಾಕಿಸ್ತಾನ ಖೈದ್ ಎ ಆಜಂನ ಮಹಮ್ಮದ್ ಅಲಿ ಜಿನ್ನಾ ಅವರು ಸೆಂಟ್ರಲ್ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ ಭಗತ್ ಸಿಂಗ್ ಅವರಿಗೆ ಹಲವು ಬಾರಿ ಗೌರವ ಸಮರ್ಪಿಸಿದ್ದು ದಾಖಲಾಗಿದೆ. ಉಪಖಂಡದಲ್ಲಿ ಇವರಂತ ವೀರಯೋಧರು ಯಾರೂ ಇಲ್ಲ ಎಂದು ಬಣ್ಣಿಸಿದ್ದಾರೆ.