ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಕಂಡಕ್ಟರ್: ಸ್ಯಾಮ್‌ಸಂಗ್‌ ಜತೆ ಅಮೆರಿಕ ₹53 ಸಾವಿರ ಕೋಟಿ ಒಪ್ಪಂದ

Published 15 ಏಪ್ರಿಲ್ 2024, 13:08 IST
Last Updated 15 ಏಪ್ರಿಲ್ 2024, 13:08 IST
ಅಕ್ಷರ ಗಾತ್ರ

ವಾಷಿಂಗ್ಟನ್: ಟೆಕ್ಸಾಸ್‌ನಲ್ಲಿ ಕಂಪ್ಯೂಟರ್ ಚಿಪ್ ಉತ್ಪಾದನೆ ಮತ್ತು ಸಂಶೋಧನಾ ಕ್ಲಸ್ಟರ್ ಅಭಿವೃದ್ಧಿಗಾಗಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ₹53 ಸಾವಿರ ಕೋಟಿ (6.4 ಬಿಲಿಯನ್ ಡಾಲರ್) ನೆರವು ನೀಡುವ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ಮುಂದಾಗಿದೆ. 

ಸೋಮವಾರ ವಾಣಿಜ್ಯ ಇಲಾಖೆಯು ಈ ನೆರವಿನ ಘೋಷಣೆ ಮಾಡಿದೆ. ದೇಶದಲ್ಲೇ ಅತ್ಯಾಧುನಿಕ ಕಂಪ್ಯೂಟರ್ ಚಿಪ್‌ಗಳನ್ನು ಉತ್ಪಾದಿಸಬೇಕು ಎಂಬ ಗುರಿಯೊಂದಿಗೆ 2022ರಲ್ಲಿ ಬೈಡನ್ ಅವರು ಚಿಪ್ಸ್ ಮತ್ತು ವಿಜ್ಞಾನ ಕಾಯ್ದೆಗೆ ಸಹಿ ಹಾಕಿದ್ದರು. ಅದರ ಭಾಗವಾಗಿಯೇ ಇದೀಗ ನೆರವು ನೀಡಲಾಗಿದೆ ಎಂದು ತಿಳಿದುಬಂದಿದೆ. 

ಈ ಕುರಿತು ಪ್ರತಿಕ್ರಿಯಿಸಿದ ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಗಿನ ರೈಮೊಂಡೊ, ‘ಪ್ರಸ್ತಾವಿತ ಯೋಜನೆಯು ಟೆಕ್ಸಾಸ್ ಅನ್ನು ಸೆಮಿಕಂಡಕ್ಟರ್ ಉತ್ಪನ್ನದಲ್ಲಿ ಕೌಶಲ ಸಾಧಿಸಲು ಹುರಿದುಂಬಿಸಲಿದೆ. ಈ ದಶಕದ ಕೊನೆಯಲ್ಲಿ ವಿಶ್ವದಲ್ಲಿ ಉತ್ಪಾದನೆಯಾಗುವ ಸೆಮಿಕಂಡಕ್ಟರ್‌ಗಳ ಪೈಕಿ ಶೇ 20ರಷ್ಟನ್ನು ಅಮೆರಿಕವೇ ಉತ್ಪಾದಿಸುವ ಗುರಿಯನ್ನು ತಲುಪಲಿದ್ದೇವೆ. ಈ ಯೋಜನೆಯ ಆರಂಭದಿಂದ ದೇಶದಲ್ಲಿ ಕನಿಷ್ಠ 17 ಸಾವಿರ ನಿರ್ಮಾಣ ಉದ್ಯೋಗಗಳು ಮತ್ತು 4500ಕ್ಕೂ ಹೆಚ್ಚು ಉತ್ಪಾದನಾ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದಿದ್ದಾರೆ. 

ಟೆಕ್ಸಾಸ್‌ನ ಟೈಲರ್ ಎಂಬಲ್ಲಿ ಸ್ಯಾಮ್‌ಸಂಗ್‌ನ ಕ್ಲಸ್ಟರ್ ನಾಲ್ಕು ಮತ್ತು ಎರಡು ನ್ಯಾನೊಮೀಟರ್ ಚಿಪ್‌ಗಳನ್ನು ತಯಾರಿಸುವ ಎರಡು ಕಾರ್ಖಾನೆಗಳು ತಲೆಎತ್ತಲಿವೆ. ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರತ್ಯೇಕ ಕಾರ್ಖಾನೆ ಸ್ಥಾಪಿತವಾಗಲಿದೆ. ಮೊದಲ ಕಾರ್ಖಾನೆಯು 2026ರಲ್ಲಿ ಉತ್ಪಾದನೆಯನ್ನು ಆರಂಭಿಸಲಿದ್ದರೆ, ಮತ್ತೊಂದು ಕಾರ್ಖಾನೆ 2027ರಿಂದ ಕಾರ್ಯನಿರ್ವಹಿಸಲಿದೆ ಎಂದು ಅಮೆರಿಕ ಸರ್ಕಾರ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT