ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

US Presidential Election:ಟ್ರಂಪ್–ಬೈಡನ್ ಮತ್ತೆ ಮುಖಾಮುಖಿ;ಅಧಿಕೃತ ಘೋಷಣೆ ಬಾಕಿ

Published 13 ಮಾರ್ಚ್ 2024, 5:00 IST
Last Updated 13 ಮಾರ್ಚ್ 2024, 5:00 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜ್ಯಗಳ ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಜಯ ಗಳಿಸುವ ಮೂಲಕ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ.

ವಾಷಿಂಗ್ಟನ್, ಜಾರ್ಜಿಯಾ, ಮಿಸಿಸಿಪ್ಪಿ ರಾಜ್ಯಗಳ ಫಲಿತಾಂಶ ಹೊರಬಿದ್ದ ಬಳಿಕ ಉಭಯ ನಾಯಕರ ಆಯ್ಕೆ ಖಚಿತಪಟ್ಟಿದೆ.

ಡೆಮಾಕ್ರಟಿಕ್ ಪಕ್ಷದ ಬೈಡನ್ ಆಗಲಿ ಅಥವಾ ರಿಪಬ್ಲಿಕನ್ ಪಕ್ಷದ ಟ್ರಂಪ್ ಆಗಲಿ ಪ್ರಾಥಮಿಕ ಚುನಾವಣೆಗಳಲ್ಲಿ ದೊಡ್ಡ ವಿರೋಧವನ್ನು ಎದುರಿಸಲಿಲ್ಲ. ಉಭಯ ನಾಯಕರು ಅಧ್ಯಕ್ಷೀಯ ಚುನಾವಣೆಗೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳಲು ಅಗತ್ಯವಿರುವ ಪ್ರತಿನಿಧಿಗಳ ಬಹುಮತವನ್ನು ಪಡೆದಿದ್ದಾರೆ.

ಜಾರ್ಜಿಯಾದ ಪ್ರಾಥಮಿಕ ಸುತ್ತಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಗತ್ಯವಿದ್ದ 1,968 ಪ್ರತಿನಿಧಿಗಳ ಬೆಂಬಲವನ್ನು ಮೀರಿರುವ ಜೋ ಬೈಡನ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

ವಾಷಿಂಗ್ಟನ್ ರಾಜ್ಯದ ಪ್ರಾಥಮಿಕ ಹಂತದ ಚುನಾವಣೆಯ ಫಲಿತಾಂಶದ ಬಳಿಕ ರಿಪಬ್ಲಿಕನ್ ಪಕ್ಷದ ಟ್ರಂಪ್ ಅವರಿಗೆ ಅಗತ್ಯವಿದ್ದ 1,215 ಪ್ರತಿನಿಧಿಗಳಿಗಿಂತ ಹೆಚ್ಚಿನ ಬೆಂಬಲ ಸಿಕ್ಕಿದ್ದು, ಅವರೂ ಸಹ ಅಧ್ಯಕ್ಷೀಯ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗುವುದು ಖಚಿತಪಟ್ಟಿದೆ. ಜುಲೈನಲ್ಲಿ ನಡೆಯಲಿರುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಟ್ರಂಪ್ ಆಯ್ಕೆಯನ್ನು ಪಕ್ಷವು ಅಧಿಕೃತವಾಗಿ ಘೋಷಣೆ ಮಾಡಲಿದೆ.

ಈ ಮೂಲಕ ಸತತ 3ನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್, ರಿಪಬ್ಲಿಕನ್ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ.

2020ರ ಬಳಿಕ ಮತ್ತೊಮ್ಮೆ ಟ್ರಂಪ್ ಮತ್ತು ಜೋ ಬೈಡನ್ ಮುಖಾಮುಖಿಯಾಗುತ್ತಿದ್ದು, ಭಾರಿ ಪ್ರಚಾರದ ಅಬ್ಬರದ ಸೂಚನೆ ಸಿಕ್ಕಿದೆ.

1956ರ ಬಳಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳ ಅದೇ ಅಭ್ಯರ್ಥಿಗಳು 2ನೇ ಬಾರಿಗೆ ಮುಖಾಮುಖಿಯಾಗುತ್ತಿರುವುದು ಇದೇ ಮೊದಲನೇ ಬಾರಿಯಾಗಿದೆ.

1956ರಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಂದಿನ ಅಧ್ಯಕ್ಷ ಡ್ವೈಟ್ ಡಿ ಐಸೆನ್‌ಹೋವರ್ ಅವರು ಡೆಮಾಕ್ರಟಿಕ್ ಎದುರಾಳಿ ಅಡ್ಲೈ ಸ್ಟೀವನ್‌ಸನ್ ಅವರನ್ನು 2ನೇ ಬಾರಿಗೆ ಸೋಲಿಸಿದ್ದರು. ಅದರ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲೂ ಇವರಿಬ್ಬರೇ ಮುಖಾಮುಖಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT