ಕೆನಡಾ: ಖಾಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಸರ್ಕಾರ ಒಟ್ಟಾವದಲ್ಲಿರುವ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟನೆ ಮಾಡಿದೆ.
ಜೂನ್‌ನಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ ಮುಖ್ಯಸ್ಥ ಪವನ್ ಕುಮಾರ್ ರೈ ಉಚ್ಚಾಟನೆಗೊಂಡ ಅಧಿಕಾರಿ ಎಂದು ಕೆನಡಾದ ಸುದ್ದಿಸಂಸ್ಥೆ ಸಿಬಿಸಿ ನ್ಯೂಸ್ ವರದಿ ಮಾಡಿದೆ.
‘ಖಾಲಿಸ್ತಾನಿ ಭಯೋತ್ಪಾದಕ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರುಗಳ ಕೈವಾಡವಿದೆ ಎಂಬುವುದಕ್ಕೆ ನಮ್ಮ ಸರ್ಕಾರದ ಬಳಿ ಸಾಕ್ಷಿಗಳಿವೆ’ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೋಮವಾರ ಮಧ್ಯಾಹ್ನ ನಡೆದ ಸಂಸತ್ ಅಧಿವೇಶನದಲ್ಲಿ ತಿಳಿಸಿದ್ದರು.
ಓದಿ: ಕೆನಡಾ: ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗುಂಡಿಕ್ಕಿ ಹತ್ಯೆ
ಈ ಬಗ್ಗೆ ಹೇಳಿಕೆ ನೀಡಿರುವ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ‘ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ನಿಲುವು ತಾಳಿದೆ. ಇಂದು ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾದಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಮೋಸ್ಟ್ ವಾಂಟೆಡ್ ಟೆರರಿಸ್ಟ್ ಪಟ್ಟಿಯಲ್ಲಿದ್ದ ಖಾಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್‌ನನ್ನು ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಿಜ್ಜರ್ ಮೇಲೆ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪವಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.