ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೈವಾನ್‌ ಅಧ್ಯಕ್ಷರಿಗೆ ಮೋದಿ ಪ್ರತಿಕ್ರಿಯೆ: ಚೀನಾ ಪ್ರತಿಭಟನೆ

Published 6 ಜೂನ್ 2024, 15:33 IST
Last Updated 6 ಜೂನ್ 2024, 15:33 IST
ಅಕ್ಷರ ಗಾತ್ರ

ಬೀಜಿಂಗ್‌: ‘ತೈವಾನ್‌ ಜತೆ ನಿಕಟ ಸಂಬಂಧ ಹೊಂದಲು ಭಾರತ ಎದುರು ನೋಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವುದಕ್ಕೆ ಚೀನಾ ಗುರುವಾರ ಪ್ರತಿಭಟನೆ ದಾಖಲಿಸಿದೆ. ಅಲ್ಲದೆ ತೈವಾನ್‌ನ ರಾಜಕೀಯ ಲೆಕ್ಕಾಚಾರಗಳನ್ನು ನವದೆಹಲಿ ವಿರೋಧಿಸಬೇಕು ಎಂದೂ ಅದು ಆಗ್ರಹಿಸಿದೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಮೋದಿ ಅವರಿಗೆ ತೈವಾನ್‌ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ‘ಎಕ್ಸ್‌’ನಲ್ಲಿ ಅಭಿನಂದನಾ ಸಂದೇಶ ಕಳುಹಿಸಿದ್ದರು. ಅದಕ್ಕೆ ಮೋದಿ ಅವರು ಪ್ರತಿಕ್ರಿಯಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಕ್ಕಾಗಿ ಅಭಿನಂದನೆಗಳು. ತೈವಾನ್‌ ಮತ್ತು ಭಾರತದ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ. ಇಂಡೋಪೆಸಿಫಿಕ್‌ನಲ್ಲಿ ಶಾಂತಿ, ಸಮೃದ್ಧಿ ನೆಲೆಸಲು, ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ವಲಯಗಳಲ್ಲಿ ಸಹಯೋಗವನ್ನು ವಿಸ್ತರಿಸಲು ಬಯಸುತ್ತಿರುವುದಾಗಿ’ ತೈವಾನ್‌ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮೋದಿ ಅವರು, ‘ಅಭಿನಂದಿಸಿದ್ದಕ್ಕೆ ಧನ್ಯವಾದಗಳು. ನಿಕಟ ಸಂಬಂಧದ ಜತೆಗೆ ಪರಸ್ಪರ ಆರ್ಥಿಕ, ತಾಂತ್ರಿಕ ಪಾಲುದಾರಿಕೆಯಲ್ಲಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದ್ದರು.

ಈ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್‌, ‘ಮೊದಲನೆಯದಾಗಿ, ತೈವಾನ್‌ ಪ್ರದೇಶದಲ್ಲಿ ಯಾವುದೇ ಅಧ್ಯಕ್ಷರು ಇಲ್ಲ. ಅದು ಪೀಪಲ್‌ ರಿಪಬ್ಲಿಕ್‌ ಆಫ್‌ ಚೀನಾದ ಭೂ ಪ್ರದೇಶದ ಬೇರ್ಪಡಿಸಲಾಗದ ಭಾಗ’ ಎಂದು ತಿಳಿಸಿದ್ದಾರೆ.

‘ಚೀನಾದ ಜತೆ ರಾಜತಾಂತ್ರಿಕ ಸಂಬಂಧ ಹೊಂದಿರುವ ದೇಶಗಳೊಂದಿಗೆ ತೈವಾನ್‌ ಅಧಿಕಾರಿಗಳ ಅಧಿಕೃತ ಸಂವಹನಗಳನ್ನು ಚೀನಾ ವಿರೋಧಿಸುತ್ತದೆ. ಈ ಕುರಿತು ಚೀನಾ, ಭಾರತಕ್ಕೆ ಪ್ರತಿಭಟನೆ ದಾಖಲಿಸಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT