ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2033ಕ್ಕೆ ಮಂಗಳನ ಅಂಗಳದಲ್ಲಿ ಚೀನಾ ಗಗನಯಾನಿಗಳ ಪದಾರ್ಪಣೆ

Last Updated 24 ಜೂನ್ 2021, 5:26 IST
ಅಕ್ಷರ ಗಾತ್ರ

ಬೀಜಿಂಗ್‌: ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕಕ್ಕೆ ನೇರ ಸವಾಲು ಒಡ್ಡಲು ಮುಂದಾಗಿರುವ ಚೀನಾ, ಮಂಗಳನತ್ತ ಗಗನಯಾನಿಗಳನ್ನು ಕೊಂಡೊಯ್ಯುವ ಯೋಜನೆ ರೂಪಿಸಿದೆ. 2033ರಲ್ಲಿ ಈ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.

ಮಂಗಳನಲ್ಲಿ ಒಂದು ಕಾಯಂ ಕಾಲೊನಿ ನಿರ್ಮಿಸುವುದು ಹಾಗೂ ಅದಕ್ಕಾಗಿ ಮಂಗಳನ ಸಂಪನ್ಮೂಲಗಳನ್ನೇ ಬಳಸಿಕೊಳ್ಳುವ ದೂರಾಲೋಚನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗುತ್ತಿದ್ದು, ಅಮೆರಿಕವು 2030ರಲ್ಲಿ ಮಂಗಳನ ಅಂಗಳಕ್ಕೆ ಗಗನಯಾನಿಗಳನ್ನು ಕಳುಹಿಸಲು ಸಿದ್ಧತೆ ನಡೆಸಿರುವಂತೆಯೇ ಚೀನಾದ ಈ ಯೋಜನೆಯೂ ಬಹಿರಂಗಗೊಂಡಿದೆ.

ರಷ್ಯಾದಲ್ಲಿ ಈಚೆಗೆ ನಡೆದ ಬಾಹ್ಯಾಕಾಶ ಶೋಧನೆಗೆ ಸಂಬಂಧಿಸಿದ ಸಮಾವೇಶವೊಂದಲ್ಲಿ ಚೀನಾದ ಮುಖ್ಯ ರಾಕೆಟ್‌ ತಯಾರಿಕಾ ಯೋಜನೆಯ ಮುಖ್ಯಸ್ಥ ವಾಂಗ್‌ ಜಿಯಾಜನ್‌ ಅವರು ವಿಡಿಯೊ ಭಾಷಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಚೀನಾವು ಈ ಯೋಜನೆಯ ಭಾಗವಾಗಿಯೇ ಕಳೆದ ಮೇ ತಿಂಗಳಲ್ಲಿ ರೊಬೋಟ್ ನಿಯಂತ್ರಿತ ರೋವರ್‌ ಒಂದನ್ನು ಮಂಗಳನಲ್ಲಿಗೆ ಕಳುಹಿಸಿದೆ. 2033ರಲ್ಲಿ ಮೊದಲ ಬಾರಿಗೆ ಗಗನಯಾನಿಗಳನ್ನು ಮಂಗಳನಲ್ಲಿಗೆ ಕಳುಹಿಸಿದ ಬಳಿಕ 2035, 2037, 2041ರಲ್ಲಿ ಮತ್ತೆ ಗಗನಯಾನಿಗಳನ್ನು ಕಳುಹಿಸಲು ಯೋಜನೆ ರೂಪಿಸುತ್ತಿದೆ.

‘ಮಂಗಳನಲ್ಲಿಗೆ ಮನುಷ್ಯರನ್ನು ಕಳುಹಿಸುವುದಕ್ಕೆ ಮೊದಲು ಕಾಲೊನಿ ನಿರ್ಮಿಸಲು ಸೂಕ್ತವಾದ ಸ್ಥಳ ಮತ್ತು ಅಲ್ಲಿನ ಸಂಪನ್ಮೂಲದಿಂದಲೇ ಕಾಲೊನಿ ನಿರ್ಮಿಸಲು ಬಳಸಿಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗುವುದು, ಅದಕ್ಕಾಗಿ ರೊಬೋಟ್‌ಗಳನ್ನು ಕಳುಹಿಸಲಾಗುವುದು‌’ ಎಂದು ವಾಂಗ್ ಅವರನ್ನು ಉಲ್ಲೇಖಿಸಿ ಚೀನಾದ ಸರ್ಕಾರ ಸ್ವಾಮ್ಯದ ‘ಚೀನಾ ಸ್ಪೇಸ್ ನ್ಯೂಸ್‌’ ವರದಿ ಮಾಡಿದೆ.

ಮಂಗಳನಲ್ಲಿರುವ ನೀರು ಬಳಸುವುದು, ಸ್ಥಳದಲ್ಲೇ ಆಮ್ಲಜನಕ ಮತ್ತು ವಿದ್ಯುತ್ ಉತ್ಪಾದಿಸುವುದು ಈ ಯೋಜನೆಯ ಭಾಗವಾಗಿದೆ. ಇದಕ್ಕೆ ಪೂರಕವಾಗಿ ಮಂಗಳನಿಂದ ಮರಳಿ ಭೂಮಿಯತ್ತ ಗಗನಯಾನಿಗಳನ್ನು ಸಾಗಿಸುವ ತಂತ್ರಜ್ಞಾನವನ್ನೂ ಚೀನಾ ಅಭಿವೃದ್ಧಿಪಡಿಸಬೇಕಿದೆ ಎಂದು ವಾಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT