ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗೊ ಜೈಲಿನಿಂದ ಪರಾರಿಗೆ ಯತ್ನ: 129 ಕೈದಿಗಳ ಸಾವು

Published 3 ಸೆಪ್ಟೆಂಬರ್ 2024, 12:56 IST
Last Updated 3 ಸೆಪ್ಟೆಂಬರ್ 2024, 12:56 IST
ಅಕ್ಷರ ಗಾತ್ರ

ಕಿನ್ಶಾಸಾ (ಕಾಂಗೊ): ಕಾಂಗೊ ರಾಜಧಾನಿಯ ಕೇಂದ್ರ ಕಾರಾಗೃಹದಿಂದ ಕೈದಿಗಳು ಪರಾರಿಯಾಗಲು ಯತ್ನಿಸಿದ ವೇಳೆ ಉಂಟಾದ ಕಾಲ್ತುಳಿತ ಮತ್ತು ಗುಂಡೇಟಿನಿಂದ 129 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ಸೋಮವಾರ ನಸುಕಿನಲ್ಲಿ ಕಿನ್ಶಾಸಾದ ಮಕಾಲಾ ಸೆಂಟ್ರಲ್ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ 24 ಕೈದಿಗಳನ್ನು ಗುಂಡೇಟಿನಿಂದ ಕೊಲ್ಲಲಾಗಿದೆ. ಉಳಿದವರು ಕಾಲ್ತುಳಿತದಿಂದ ಸತ್ತಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಕಾಂಗೊದ ಗೃಹ ಸಚಿವ ಜಾಕ್ವೆಮಿನ್ ಶಬಾನಿ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡಿರುವ 59 ಮಂದಿಗೆ ಸರ್ಕಾರದಿಂದ ಚಿಕಿತ್ಸೆ ಕೊಡಿಸಲಾಗಿದೆ. ಗಾಯಗೊಂಡ ಮಹಿಳಾ ಕೈದಿಗಳಲ್ಲಿ ಹೆಚ್ಚಿನವರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಬಂದೀಖಾನೆಯ ಒಂದು ಭಾಗ ಕೈದಿಗಳು ನಡೆಸಿದ ದಾಳಿಯ ವೇಳೆ ಬೆಂಕಿಗೆ ಆಹುತಿಯಾಗಿದೆ. ಸದ್ಯ ಬಂದೀಖಾನೆಯ ಸೌಲಭ್ಯಗಳನ್ನು ಮೊದಲಿನ ಸ್ಥಿತಿಗೆ ತರಲಾಗಿದೆ ಎಂದು ಸಚಿವರು ಹೇಳಿದ್ದಾರೆ. 

1,500 ಕೈದಿಗಳ ಸಾಮರ್ಥ್ಯದ ಈ ಕಾರಾಗೃಹದಲ್ಲಿ 12,000 ಕೈದಿಗಳನ್ನು ಇಡಲಾಗಿದೆ. ಇದರಲ್ಲಿ ಬಹುತೇಕರು ವಿಚಾರಣಾಧೀನ ಕೈದಿಗಳು ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಇತ್ತೀಚಿನ ವರದಿ ಹೇಳಿದೆ. 2017ರಲ್ಲಿ ಧಾರ್ಮಿಕ ಪಂಥದವರು ದಾಳಿ ನಡೆಸಿ ಹತ್ತಾರು ಕೈದಿಗಳನ್ನು ಜೈಲಿನಿಂದ ತಪ್ಪಿಸಿಕೊಳ್ಳುವಂತೆ ಮಾಡಿದ ಘಟನೆಯು ಸೇರಿದಂತೆ, ಹಲವು ಬಾರಿ ನಡೆದ ಪರಾರಿ ಯತ್ನದ ಘಟನೆಗಳಿಗೆ ಹೋಲಿಸಿದರೆ ಇಷ್ಟೊಂದು ಡೊಡ್ಡ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.

ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ನಸುಕಿನವರೆಗೆ ಜೈಲಿನೊಳಗೆ ಗುಂಡಿನ ದಾಳಿ ನಡೆಯಿತು ಎಂದು ನಿವಾಸಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಮಾತ್ರ ಸತ್ತಿದ್ದಾರೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಮಾಹಿತಿ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ದಾಳಿಯು ಪೂರ್ವಯೋಜಿತ ವಿಧ್ವಂಸಕ ಕೃತ್ಯ. ಈ ವಿಧ್ವಂಸಕ ಕೃತ್ಯಗಳನ್ನು ಪ್ರಚೋದಿಸಿದವರಿಗೆ ಕಠಿಣ ಶಿಕ್ಷೆ ಕಾದಿದೆ  
ಕಾನ್‌ಸ್ಟೆಂಟ್ ಮುತಂಬಾ ನ್ಯಾಯ ಸಚಿವ ಕಾಂಗೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT