ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಆಫ್ರಿಕಾ: ಕಾಲ್ತುಳಿತ– ಸತ್ತವರ ಸಂಖ್ಯೆ 45ಕ್ಕೆ ಏರಿಕೆ

ಮಾಜಿ ಅಧ್ಯಕ್ಷ ಜುಮಾಗೆ ಜೈಲು ಶಿಕ್ಷೆಯಾದ ಬೆನ್ನಲ್ಲೇ ಭುಗಿಲೆದ್ದ ಗಲಭೆ
Last Updated 13 ಜುಲೈ 2021, 16:32 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್ (ಎಎಫ್‌ಪಿ/ರಾಯಿಟರ್ಸ್‌): ಜೋಹಾನ್ಸ್‌ಬರ್ಗ್‌ ಹೊರವಲಯದ ಸೊವೆಟೊದಲ್ಲಿನ ವಾಣಿಜ್ಯ ಸಂಕೀರ್ಣವನ್ನು ಗಲಭೆಕೋರರು ಲೂಟಿ ಮಾಡಿದ್ದು, ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿದ್ದಾರೆ.

‘ಈ ವಾಣಿಜ್ಯ ಸಂಕೀರ್ಣದಲ್ಲಿ ಸೋಮವಾರ ತಡರಾತ್ರಿ 10 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಪ್ರಾಂತ್ಯದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೇರಿದಂತಾಗಿದೆ’ ಎಂದು ಗೌಟೆಂಗ್‌ ಪ್ರಾಂತ್ಯದ ಪ್ರಧಾನಿ ಡೇವಿಡ್‌ ಮಖುರಾ ಮಂಗಳವಾರ ಹೇಳಿದ್ದಾರೆ. ಜೋಹಾನ್ಸ್‌ಬರ್ಗ್‌ ನಗರ ಗೌಟೆಂಗ್‌ ಪ್ರಾಂತ್ಯದಲ್ಲಿದೆ.

ಕ್ವಾಜುಲು–ನಟಾಲ್‌ ಪ್ರಾಂತ್ಯದಲ್ಲಿ ನಡೆದ ಗಲಭೆ, ಹಿಂಸಾಚಾರದಲ್ಲಿ 26 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಎರಡು ಪ್ರಾಂತ್ಯಗಳಲ್ಲಿನ ಗಲಭೆ, ಕಾಲ್ತುಳಿತದಲ್ಲಿ ಸತ್ತವರ ಸಂಖ್ಯೆ 45ಕ್ಕೇರಿದಂತಾಗಿದೆ.

ಗೌಟೆಂಗ್‌ ಹಾಗೂ ಕ್ವಾಜುಲು–ನಟಾಲ್‌ ‍ಪ್ರಾಂತ್ಯಗಳಲ್ಲಿ ಕಳೆದ ಐದು ದಿನಗಳಿಂದ ಗಲಭೆ, ಅಂಗಡಿಗಳ ಲೂಟಿ ನಡೆಯುತ್ತಿದೆ. ಮಂಗಳವಾರವೂ ಈ ಪ್ರಾಂತ್ಯಗಳಲ್ಲಿ ಅಂಗಡಿಗಳ ಲೂಟಿ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಅಧ್ಯಕ್ಷ ಸಿರಿಲ್‌ ರಾಮಫೊಸಾ ಅವರು ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ ಈ ವರೆಗೆ 757 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಭೇಕಿ ಸೆಲೆ ತಿಳಿಸಿದ್ದಾರೆ. ‘ಪರಿಸ್ಥಿತಿ ಮತ್ತಷ್ಟೂ ವಿಕೋಪಕ್ಕೆ ಹೋಗದಂತೆ ಪೊಲೀಸರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್‌ ಜುಮಾ ಅವರಿಗೆ 15 ತಿಂಗಳ ಜೈಲು ಶಿಕ್ಷೆಯಾಗಿದೆ. ಅವರನ್ನು ಜೈಲಿಗೆ ಕಳಿಸಿದ ನಂತರ ಹಿಂಸಾಚಾರ, ಗಲಭೆ ಭುಗಿಲೆದ್ದಿದೆ.

ಡರ್ಬಾನ್‌ನಲ್ಲೂ ಗಲಭೆ: ದಕ್ಷಿಣ ಆಫ್ರಿಕಾದ ಬಂದರು ನಗರ ಡರ್ಬಾನ್‌ನಲ್ಲಿ ಸಹ ಉಗ್ರಾಣಗಳು ಹಾಗೂ ಸುಪರ್‌ಮಾರ್ಕೆಟ್‌ಗಳನ್ನು ಗಲಭೆಕೋರರು ಲೂಟಿ ಮಾಡಿದ್ದಾರೆ.

ದಿನಸಿ, ಗೃಹೋಪಯೋಗಿ ವಸ್ತುಗಳು ಹಾಗೂ ಮಾಂಸದ ಪೊಟ್ಟಣಗಳನ್ನು ಲೂಟಿಕೋರರು ಉಗ್ರಾಣಗಳಿಂದ ಹೊತ್ತೊಯ್ಯುತ್ತಿದ್ದ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಜನರು ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಓಡಿ ಹೋಗುತ್ತಿದ್ದರು. ಕೆಲವರು ಟ್ರಕ್‌ಗಳ ನಂಬರ್ ಪ್ಲೇಟ್‌ಗಳನ್ನು ಮರೆ ಮಾಚಿ, ಲೂಟಿ ಮಾಡಿದ ವಸ್ತುಗಳನ್ನುಈ ಟ್ರಕ್‌ಗಳಲ್ಲಿ ಹೇರಿಕೊಂಡು ಪರಾರಿಯಾಗುತ್ತಿದ್ದ ದೃಶ್ಯಗಳು ಕಂಡು ಬಂದವು ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT