ಕರಾಚಿ: ಸಂಘರ್ಷ ಪೀಡಿತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಸೋಮವಾರ ಪ್ರತ್ಯೇಕತಾವಾದಿಗಳು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 33 ಬಸ್ ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬಲೂಚಿಸ್ತಾನದ ಮುಸಾಖೇಲ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಬಸ್‌ವೊಂದರಲ್ಲಿದ್ದ ಪ್ರಯಾಣಿಕರನ್ನು ಕೆಳೆಗೆ ಇಳಿಸಿದ್ದಾರೆ. ಅವರಲ್ಲಿದ್ದವರ ಪೈಕಿ, ಪಂಜಾಬ್ ಪ್ರಾಂತ್ಯದವರನ್ನು ಗುರುತಿಸಿ, ಕನಿಷ್ಠ 23 ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಯೂಬ್ ಖೋಸೊ ತಿಳಿಸಿದ್ದಾರೆ.
‘ಹತ್ಯೆಯಾದವರಲ್ಲಿ ಕೆಲವರು ಖೈಬರ್ ಪಂಖ್ತುಖ್ವಾ ಪ್ರಾಂತ್ಯದವರೂ ಸೇರಿದ್ದಾರೆ. ಜನಾಂಗೀಯ ಹಿನ್ನೆಲೆ ಕಾರಣದಿಂದಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದಿದ್ದಾರೆ.
ಈ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಹೊತ್ತುಕೊಂಡಿದೆ.
ಬಲೂಚಿಸ್ತಾನದ ಕಲಾತ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ, ಬಂದೂಕುಧಾರಿಗಳು ಕನಿಷ್ಠ 10 ಜನರನ್ನು ಕೊಂದಿದ್ದಾರೆ.