ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೇಖ್ ಹಸೀನಾ ರಾಜಕೀಯಕ್ಕೆ ಮರಳುವುದಿಲ್ಲ: ಮಗ ಸಜೀದ್ ಜಾಯ್

Published 5 ಆಗಸ್ಟ್ 2024, 16:05 IST
Last Updated 5 ಆಗಸ್ಟ್ 2024, 16:05 IST
ಅಕ್ಷರ ಗಾತ್ರ

ಲಂಡನ್: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಬಾಂಗ್ಲಾದೇಶ ತೊರೆದಿರುವ ಶೇಖ್ ಹಸೀನಾ ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಅವರ ಮಗ ಮತ್ತು ಮಾಜಿ ಅಧಿಕೃತ ಸಲಹೆಗಾರ ಸಜೀದ್ ವಾಜೆದ್ ಜಾಯ್ ಹೇಳಿದ್ದಾರೆ. ಅವರ ಸುರಕ್ಷತೆ ದೃಷ್ಟಿಯಿಂದ ಕುಟುಂಬದ ಸಲಹೆ ಪರಿಗಣಿಸಿ ಅವರು ದೇಶ ತೊರೆದಿದ್ದಾರೆ ಎಂದೂ ಜಾಯ್ ಹೇಳಿದ್ದಾರೆ.

ತಮ್ಮ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಹಸೀನಾ, ಸೇನಾ ವಿಮಾನದಲ್ಲಿ ಭಾರತದ ಮೂಲಕ ಲಂಡನ್‌ಗೆ ತೆರಳಿದ್ದಾರೆ.

ಈ ಕುರಿತಂತೆ ಬಿಬಿಸಿಯ ನ್ಯೂಸ್ ಅವರ್ ಸಂದರ್ಶನದಲ್ಲಿ ಮಾತನಾಡಿರುವ ಜಾಯ್, ನಮ್ಮ ತಾಯಿ ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾನುವಾರವೇ ಅವರು ರಾಜೀನಾಮೆಗೆ ನಿರ್ಧರಿಸಿದ್ದರು. ಕುಟುಂಬದ ಸಲಹೆ ಮೇರೆಗೆ ಅವರ ಸುರಕ್ಷತೆ ದೃಷ್ಟಿಯಿಂದ ದೇಶ ತೊರೆದಿದ್ದಾರೆ ಎಂದು ಮಗ ತಿಳಿಸಿದ್ದಾರೆ.

‘ದೇಶಕ್ಕಾಗಿ ಬಹಳ ಶ್ರಮಪಟ್ಟು ದುಡಿದ ಅವರ ವಿರುದ್ಧವೇ ಜನ ತಿರುಗಿಬಿದ್ದಿದ್ದರಿಂದ ತೀವ್ರ ಹತಾಶರಾಗಿದ್ದೇವೆ’ಎಂದು ಅವರು ಹೇಳಿದ್ದಾರೆ.

‘15 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ನಮ್ಮ ತಾಯಿ, ಅಧಿಕಾರಕ್ಕೆ ಬರುವ ಮುನ್ನ ದೇಶವನ್ನು ವಿಫಲ ರಾಷ್ಟ್ರ, ಬಡ ರಾಷ್ಟ್ರ ಎಂದು ಪರಿಗಣಿಸಲಾಗುತ್ತಿತ್ತು. ಈಗ ಬಾಂಗ್ಲಾದೇಶವನ್ನು ಏಷ್ಯಾದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೆಂದು ಪರಿಗಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದಂಗೆ ಅವರನ್ನು ಹತಾಶರನ್ನಾಗಿಸಿದೆ’ಎಂದು ಜಾಯ್ ತಿಳಿಸಿದ್ದಾರೆ.

ಹಸೀನಾ ರಾಜೀನಾಮೆಗೆ ಒತ್ತಾಯಿಸಿ ನಿನ್ನೆಯಿಂದ ಆರಂಭವಾಗಿದ್ದ ಅಸಹಕಾರ ಚಳವಳಿ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮತ್ತು ಅವಾಮಿ ಲೀಗ್ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 106ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ವಿವಾದಿತ ಯೋಜನೆಯ ವಿರುದ್ಧ ಕಳೆದ ತಿಂಗಳಿನಿಂದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT