ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಫೋರ್ನಿಯಾ: ಜಾತಿವಿರೋಧಿ ತಾರತಮ್ಯ ಮಸೂದೆ ಅಂಕಿತಕ್ಕೆ ಗವರ್ನರ್ ನಿರಾಕರಣೆ

Published 8 ಅಕ್ಟೋಬರ್ 2023, 13:06 IST
Last Updated 8 ಅಕ್ಟೋಬರ್ 2023, 13:06 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಕ್ಯಾಲಿಫೋರ್ನಿಯಾದ ಸರ್ಕಾರ ರೂಪಿಸಿದ್ದ ಜಾತಿವಿರೋಧಿ ತಾರತಮ್ಯ ಮಸೂದೆಗೆ ಅಂಕಿತ ಹಾಕಲು ಗವರ್ನರ್‌ ಗೇವಿನ್ ನ್ಯೂಸಮ್ ನಿರಾಕರಿಸಿದ್ದಾರೆ.

‘ಈ ಮಸೂದೆ ಅನಗತ್ಯವಾಗಿತ್ತು. ಜಾತಿ ಆಧಾರಿತ ತಾರತಮ್ಯ ನಿಷೇಧಿಸುವ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ‘ ಎಂದು ಗವರ್ನರ್‌ ಹೇಳಿದ್ದಾರೆ. 

ಕ್ಯಾಲಿಫೋರ್ನಿಯಾದ ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್‌ ಬಹುಮತದಿಂದ ಈಚೆಗೆ ಮಸೂದೆ ಅಂಗೀಕರಿಸಿದ್ದವು.

ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿರುವ ಗವರ್ನರ್‌ ಅವರ ನಿರ್ಧಾರವನ್ನು ರಾಜ್ಯದಲ್ಲಿನ ಹಿಂದೂ ಪೋಷಕರು, ಭಾರತ ಮೂಲದ ಅಮೆರಿಕನ್ನರು, ದಲಿತಪರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಸ್ವಾಗತಿಸಿವೆ.

‘ರಾಜ್ಯದಲ್ಲಿ ಪ್ರತಿಯೊಬ್ಬರು ಘನತೆ, ಗೌರವ ಪಡೆಯಲು ಅರ್ಹರಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅವರು ಯಾರು, ಎಲ್ಲಿಂದ ಬಂದರು, ಯಾರನ್ನು ಪ್ರೀತಿಸುತ್ತಾರೆ, ಎಲ್ಲಿ ವಾಸವಿದ್ದಾರೆ ಎಂಬುದು ಮುಖ್ಯವಲ್ಲ’ ಎಂದು ಗವರ್ನರ್ ನ್ಯೂಸಮ್‌ ಅವರು ಈ ಸಂಬಂಧ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇದೇ ಕಾರಣದಿಂದ ಕ್ಯಾಲಿಫೋರ್ನಿಯಾದಲ್ಲಿ ಈಗಾಗಲೇ ಲಿಂಗ, ವರ್ಣ, ಜನಾಂಗ, ಧರ್ಮ, ಪೂರ್ವ ಇತಿಹಾಸ, ರಾಷ್ಟ್ರೀಯತೆ, ಅಂಗವಿಕಲತೆ, ಲಿಂಗಸೂಚಕ ಮತ್ತು ಇತರೆ ಅಂಶಗಳ ಆಧಾರದಲ್ಲಿ ತಾರತಮ್ಯ ಎಸಗುವುದನ್ನು ನಿಷೇಧಿಸಲಾಗಿದೆ. ಈ ವಿಷಯದಲ್ಲಿ ಜನರ ಹಕ್ಕುಗಳ ರಕ್ಷಣೆಯಾಗಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ಹಾಲಿ ಕಾಯ್ದೆಯಲ್ಲಿ ಜಾತಿ ಆಧಾರಿತ ತಾರತಮ್ಯ ನಿಷೇಧಿಸಿರುವ ಕಾರಣ ಈ ಮಸೂದೆ ಅನಗತ್ಯ. ಹೀಗಾಗಿ, ‘ಎಸ್‌ಬಿ403’ ಹೆಸರಿನ ಮಸೂದೆಗೆ ಅಂಕಿತ ಹಾಕಲಾಗದು’ ಎಂದು ಅವರು ವಿವರಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ನಾಯಕ ಅಜಯ್‌ ಭುಟೊರಿಯಾ ಅವರು ಈ ಕುರಿತ ಹೇಳಿಕೆಯಲ್ಲಿ, ‘ಇದು, ಸ್ಮರಣಿಯ ಬೆಳವಣಿಗೆ. ಇದಕ್ಕಾಗಿ ಗವರ್ನರ್ ಅವರಿಗೆ ಕೃತಜ್ಞತೆಗಳು’ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಷಿಕಾಗೊದಲ್ಲಿ ನಡೆದಿದ್ದ ಡೆಮಾಕ್ರಾಟಿಕ್‌ ರಾಷ್ಟ್ರೀಯ ಸಮಿತಿ (ಡಿಎನ್‌ಸಿ) ಸಮಾವೇಶದಲ್ಲಿ ಭುಟೊರಿಯಾ ಮತ್ತು ಬಾಸ್ಟನ್‌ ಕ್ಷೇತ್ರದ ರಾಕೇಶ್ ಕಾಪುರ್ ಅವರು, ಮಸೂದೆಗೆ ಅಂಕಿತ ಹಾಕಬಾರದು ಎಂದು ಒತ್ತಾಯಿಸಿದ್ದರು.

ಅಂಬೇಡ್ಕರ್‌–ಫುಲೆ ನೆಟ್‌ವರ್ಕ್ ಆಫ್ ಅಮೆರಿಕನ್ಸ್ ದಲಿತ್ಸ್ ಸಂಘಟನೆಯ ಅಧ್ಯಕ್ಷೆ ವಿ.ವೈಶಾಲಿ, ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ತೆನ್‌ಮೊಳಿ ಸೌಂದರರಾಜನ್‌ ಸೇರಿ ಹಲವರು ಗವರ್ನರ್ ನಿರ್ಧಾರ ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT