ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಅಲ್ಲದ ವಿವಾಹ: ಪಾಕ್‌ನ ಇಮ್ರಾನ್ ಖಾನ್, ಪತ್ನಿಗೆ ತಲಾ ಏಳು ವರ್ಷ ಜೈಲು

Published 3 ಫೆಬ್ರುವರಿ 2024, 13:44 IST
Last Updated 3 ಫೆಬ್ರುವರಿ 2024, 13:44 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ‘ಮುಸ್ಲಿಂ ಅಲ್ಲದ ವಿವಾಹ‘ದ ಕಾರಣಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಪಾಕಿಸ್ತಾನದ ನ್ಯಾಯಾಲಯ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಶನಿವಾರ ತೀರ್ಪು ಪ್ರಕಟಿಸಿದೆ. 

ಮುಸ್ಲಿಂ ಸಂಪ್ರದಾಯದಂತೆ, ಎರಡು ಮದುವೆಗಳ ನಡುವಿನ ಕಡ್ಡಾಯ ಸಮಯ ಪಾಲನೆ ಅಥವಾ ಇದ್ದತ್ ಅನ್ನು ಬುಶ್ರಾ ಬೀಬಿ ಉಲ್ಲಂಘಿಸಿದ್ದಾರೆ ಎಂದು ಅವರ ಮೊದಲ ಪತಿ ಖವರ್ ಮನೇಕಾ ಪ್ರಕರಣ ದಾಖಲಿಸಿದ್ದರು. ಮದುವೆಗೂ ಮುನ್ನವೇ ಇಮ್ರಾನ್ ಜತೆ ಬುಶ್ರಾ ಅಕ್ರಮ ಸಂಬಂಧ ಹೊಂದಿದ್ದರು ಎಂದು ಕೂಡ ಅವರು ಆರೋಪಿಸಿದ್ದರು.

‘ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿ ಶುಕ್ರವಾರ 14 ಗಂಟೆ ಕಾಲ ಪ್ರಕರಣದ ವಿಚಾರಣೆ ನಡೆದಿತ್ತು. ಒಂದು ದಿನದ ನಂತರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಖುದ್ರತ್‌ಉಲ್ಲಾ ತೀರ್ಪನ್ನು ಪ್ರಕಟಿಸಿದ್ದು, ದಂಪತಿಗೆ ತಲಾ ₹5 ಲಕ್ಷ ದಂಡವನ್ನೂ ವಿಧಿಸಿದ್ದಾರೆ’ ಎಂದು ‘ಜಿಯೋ ನ್ಯೂಸ್ ವರದಿ ಮಾಡಿದೆ.

ತೀರ್ಪು ಪ್ರಕಟಿಸುವ ವೇಳೆ ಇಮ್ರಾನ್ ಹಾಗೂ ಅವರ ಪತ್ನಿ ಬುಶ್ರಾ ನ್ಯಾಯಾಲಯದಲ್ಲಿ ಹಾಜರಿದ್ದರು.

ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಸ್ಥಾಪಕರಾದ 71 ವರ್ಷದ ಇಮ್ರಾನ್ ಖಾನ್ 2022ರಿಂದ ಈಚೆಗೆ ಶಿಕ್ಷೆಗೆ ಒಳಗಾಗುತ್ತಿರುವ ನಾಲ್ಕನೆಯ ಪ್ರಕರಣ ಇದಾಗಿದೆ.

ತೋಷಖಾನಾ ಪ್ರಕರಣದಲ್ಲಿ ಇಮ್ರಾನ್ ಹಾಗೂ ಬೀಬಿ ಅವರಿಗೆ ಮೂರು ದಿನಗಳ ಹಿಂದೆ 14 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಒಂದು ವಾರದ ಮುಂಚೆ ಇಮ್ರಾನ್ ಖಾನ್ ಅವರಿಗೆ ಅಧಿಕೃತ ರಹಸ್ಯ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

ಪಾಕಿಸ್ತಾನದಲ್ಲಿ ಇದ್ದತ್ ಕುರಿತು ವಿಚಾರಣೆಗೆ ಒಳಗಾದ ಮೊದಲ ಪ್ರಕರಣ ಇದಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾಗಿ ಡಾನ್.ಕಾಮ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT