ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವ್ಯವಸ್ಥೆಯತ್ತ ಭಾರತದ ಸ್ಥಿತ್ಯಂತರ: ಆ್ಯಶ್ಲೆ ಜೆ.ಟೆಲ್ಲಿಸ್ ಅಭಿಪ್ರಾಯ

‘ಒಂದೇ ಪಕ್ಷದ ಪ್ರಾಬಲ್ಯ ಪ್ರಜಾಪ್ರಭುತ್ವಕ್ಕೆ ಮಾರಕವೇ?’– ಅಮೆರಿಕದಲ್ಲಿ ಸಂವಾದ
Published 18 ಏಪ್ರಿಲ್ 2024, 14:06 IST
Last Updated 18 ಏಪ್ರಿಲ್ 2024, 14:06 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕಾಂಗ್ರೆಸ್‌ ಪ್ರಾಬಲ್ಯದ ವ್ಯವಸ್ಥೆಯಿಂದ ಬಿಜೆಪಿ ನಿಯಂತ್ರಣದ ವ್ಯವಸ್ಥೆಯತ್ತ ಭಾರತ ಸ್ಥಿತ್ಯಂತರಗೊಳ್ಳುತ್ತಿದೆ. ಆದರೆ, ಬಿಜೆಪಿ ದಕ್ಷಿಣ ಭಾರತವನ್ನು ವ್ಯಾಪಿಸಲಿದೆಯೇ ಎಂಬುದನ್ನು ಈಗ ಕಾಯ್ದು
ನೋಡಬೇಕಿದೆ ಎಂದು ಅಮೆರಿಕದ ರಾಜಕೀಯ ಪರಿಣತರಾದ ಆ್ಯಶ್ಲೆ ಜೆ.ಟೆಲ್ಲಿಸ್ ಅಭಿಪ್ರಾಯಪಟ್ಟಿದ್ದಾರೆ. 

‘ಒಂದೇ ಪಕ್ಷದ ಅತಿಯಾದ ಪ್ರಾಬಲ್ಯವು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕವೇ’ ಎಂಬ ವಿಷಯದ ಕುರಿತು ಅವರು ಬುಧವಾರ ಮಾತನಾಡಿದರು. ‘ಮೋದಿಯವರ ಮೂರನೇ ಅವಧಿಯತ್ತ ಭಾರತ’ ಎಂಬುದು ಚರ್ಚೆಯ ವಿಷಯವಾಗಿತ್ತು.

ಕಾರ್ನೆಜ್ ದತ್ತಿ ಚಿಂತಕರ ಚಾವಡಿಯ ಹಿರಿಯ ಸದಸ್ಯರಾದ ಟೆಲ್ಲಿಸ್‌, ಪ್ರಧಾನಿ ಮೋದಿ ನೇತೃತ್ವದ ಆಡಳಿತ ಪಕ್ಷವು ಈಗ ಮೂರನೇ ಬಾರಿಗೆ ಅಧಿಕಾರದತ್ತ ಹೆಜ್ಜೆ ಇಟ್ಟಿರುವಂತಿದೆ. ಸಮೀಕ್ಷೆಗಳು ನಿಜವೇ ಆದರೆ, ಪ್ರಧಾನಿ ಸ್ಪಷ್ಟ ಬಹುಮತದಿಂದ ಮತ್ತೊಂದು ಅವಧಿಗೆ ಆಯ್ಕೆ ಆಗುವುದು ನಿಶ್ಚಿತ ಎಂದರು. 

‘ಬಿಜೆಪಿ ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುವ ಕಡೇ ಹಂತದಲ್ಲಿ ನಾವಿದ್ದೇವೆ. ಆದರೆ, ಭಾರತದ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಧಕ್ಕೆಯಾಗುವ ಆತಂಕಕ್ಕೆ ಕಾರಣಗಳಿವೆಯೇ? ಸರಳವಾಗಿ ಹೇಳುವುದಾದರೆ, ಇದು ಅಲ್ಪಸಂಖ್ಯಾತರಿಗಷ್ಟೇ ಸಂಬಂಧಿಸಿದ್ದಲ್ಲ. ಕೇಂದ್ರದಲ್ಲಿ ಒಂದೇ ಪಕ್ಷ ಹೆಚ್ಚು ಪ್ರಬಲವಾಗುವುದು, ಆಡಳಿತದ ಇತರೆ ಅಂಗಗಳು, ಮಾಧ್ಯಮ ಒಳಗೊಂಡ ನಾಗರಿಕ ಸಮಾಜದಲ್ಲಿ ಪರಮಾಧಿಕಾರ ಹೊಂದುವುದು ನಡೆಯುತ್ತಿದೆ. ಮುಂದಿನ ಐದು ವರ್ಷ ಭಾರತ ಪ್ರಜಾಪ್ರಭುತ್ವದ ಸ್ಥಿತಿಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ’ ಎಂದು ಟೆಲ್ಲಿಸ್‌ ಪ್ರಶ್ನಿಸಿದರು. 

ಏಷ್ಯಾ ಸಮೂಹ ಸಂಸ್ಥೆಯ ಪಾಲುದಾರ ಅಶೋಕ್‌ ಮಲಿಕ್ ಅವರು, ‘ಭಾರತ ಎಂದಿಗೂ ಎಂದಿಗೂ ದ್ವಿಪಕ್ಷದ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಒಬ್ಬ ಭಾರತೀಯನಾಗಿ ನನಗೆ ಈ ಬಗ್ಗೆ ವಿಷಾದವಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪ್ರಾಬಲ್ಯವಿದ್ದಾಗ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಪ್ರಾಮುಖ್ಯ ಕಳೆದುಕೊಂಡಿದ್ದವು. 2014ರ ನಂತರ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿತು. ಇಂದು ಕಾಂಗ್ರೆಸ್‌ನ ವ್ಯಾಪ್ತಿ ಸೀಮಿತವಾಗಿದೆ. ಈಗಿನ ಸ್ಥಿತಿ ನಿರಾಸೆ ಮೂಡಿಸಲಿದೆ. ಸರ್ಕಾರ ಎಚ್ಚರವಾಗಿರುವಂತೆ ಸ್ಪರ್ಧಾತ್ಮಕ ಸ್ಥಿತಿ ಇರಬೇಕು ಎಂದು ಬಯಸುತ್ತೇನೆ’ ಎಂದರು.

ಇದರರ್ಥ, ವಿರೋಧ ಪಕ್ಷ ಮಾತ್ರವೇ ಸರ್ಕಾರದ ಮೇಲೆ ಕಣ್ಣಿಡಲಿದೆ ಎಂದಲ್ಲ. ಇತರೆ ಅಂಗಗಳೂ ಇವೆ. ಮೋದಿ ಸದ್ಯ ನಿರೀಕ್ಷೆ ಮೀರಿದ ಜನಪ್ರಿಯತೆ ಹೊಂದಿದ್ದಾರೆ ಎಂದು ಮಲಿಕ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT