ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಸವಾಲುಗಳನ್ನು ಎದುರಿಸಲು ಭಾರತ ಶಕ್ತ: ಜೈಶಂಕರ್‌

Last Updated 13 ಏಪ್ರಿಲ್ 2023, 13:36 IST
ಅಕ್ಷರ ಗಾತ್ರ

ಕಂಪಾಲ: ‘ಈಗಿರುವುದು ಭಿನ್ನ ಭಾರತ, ಈಗಿನ ಭಾರತವು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತದೆ ಎಂದು ದಶಕಗಳ ಕಾಲ ಭಾರತದ ಜೊತೆ ಗಡಿ ತಿಕ್ಕಾಟ ನಡೆಸಿದ ದೇಶಗಳಿಗೆ ಈಗ ಮನವರಿಕೆ ಆಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಉಗಾಂಡದಲ್ಲಿ ಬುಧವಾರ ಹೇಳಿದರು.

ಉಗಾಂಡದ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಚೀನಾ ಮತ್ತು ಪಾಕಿಸ್ತಾನ ತಂದೊಡ್ಡುತ್ತಿರುವ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಇಂದಿನ ಭಾರತ ಶಕ್ತವಾಗಿದೆ. ಈಗ ಜನರು ಬೇರೆಯದ್ದೇ ಭಾರತವನ್ನು ನೋಡುತ್ತಿದ್ದಾರೆ ಎಂದು ಒತ್ತಿ ಹೇಳಿದರು.

2016ರಲ್ಲಿ ‘ಉರಿ’ ಸೇನಾನೆಲೆ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್‌ನಲ್ಲಿದ್ದ ಉಗ್ರರ ಶಿಬಿರದ ಮೇಲೆ ನಡೆಸಿದ್ದ ವಾಯುದಾಳಿ ಕುರಿತು ಮಾತನಾಡಿದ ಅವರು, ಗಡಿ ಬಳಿಯ ಭಯೋತ್ಪಾದನೆಗೆ ಭಾರತ ತಕ್ಕ ಉತ್ತರ ನೀಡುತ್ತದೆ ಎಂದು ನೆರೆ ದೇಶಗಳಿಗೆ ಈಗ ಮನವರಿಕೆಯಾಗಿದೆ ಎಂದರು.

ಗಡಿ ಬಳಿ ಚೀನಾ ಎಸೆಯುತ್ತಿರುವ ಸವಾಲುಗಳ ಕುರಿತು ಮಾತನಾಡಿದ ಅವರು, ‘ಗಡಿ ಒಪ್ಪಂದಗಳನ್ನು ಉಲ್ಲಂಘಿಸಿರುವ ಚೀನಾ ಕಳೆದ ಮೂರು ವರ್ಷಗಳಿಂದ ಗಡಿ ಬಳಿ ತನ್ನ ಸೇನೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಸೇನೆಯನ್ನು ಅತಿ ಎತ್ತರದ ಪ್ರದೇಶಗಳಲ್ಲೂ ನಿಯೋಜಿಸಿದೆ. ಸೇನೆಗೆ ಅಗತ್ಯ ಮೂಲಸೌಕರ್ಯ ಮತ್ತು ಉಪಕರಣಗಳನ್ನು ಒದಗಿಸಲಾಗಿದೆ’ ಎಂದರು.

‘ಭಾರತ ಈಗ ಅತ್ಯಂತ ಹೆಚ್ಚು ಸ್ವತಂತ್ರ ದೇಶವಾಗಿದೆ. ದೇಶದ ನೀತಿ, ನಿಯಮಗಳು ಹೊರಗಿನ ಒತ್ತಡಕ್ಕೆ ಒಳಗಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT