ವೀಯೆಂಟಿಯಾನ್: ಲಾವೋಸ್‌ನ ಬೊಕಿಯೊ ಪ್ರಾಂತ್ಯದ ಸೈಬರ್ ಅಪರಾಧ ಕೇಂದ್ರಗಳಲ್ಲಿ ಸಿಲುಕಿದ್ದ 47 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿಯು ಶನಿವಾರ ತಿಳಿಸಿದೆ.
ಲಾವೋಸ್‌ನಲ್ಲಿ ಕೆಲಸ ಕೊಡಿಸುವುದಾಗಿ ಹೇಳುವ ನಕಲಿ ಜಾಹೀರಾತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಭಾರತದ ಅಧಿಕಾರಿಗಳು ಆಗಾಗ ಹೇಳುತ್ತ ಬಂದಿದ್ದಾರೆ. ವಂಚನೆಗೆ ಒಳಗಾಗದೆ ಇರಲು, ಉದ್ಯೋಗ ಅವಕಾಶಗಳ ಕುರಿತ ವಿವರಗಳನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಕೂಡ ಅವರು ಹೇಳುತ್ತಿದ್ದಾರೆ.
ಇಲ್ಲಿ ಭಾರತೀಯ ರಾಯಭಾರ ಕಚೇರಿಯು ಇದುವರೆಗೆ 635 ಮಂದಿ ಭಾರತೀಯರನ್ನು ರಕ್ಷಿಸಿದ್ದು, ಅವರಿಗೆ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಲು ನೆರವಾಗಿದೆ.
ಬೊಕಿಯೊ ಪ್ರಾಂತ್ಯದ ಗೋಲ್ಡನ್ ಟ್ರಯಾಂಗಲ್ ವಿಶೇಷ ಆರ್ಥಿಕ ವಲಯದ ಸೈಬಲ್ ಅಪರಾಧ ಕೇಂದ್ರಗಳಲ್ಲಿ ಸಿಲುಕಿದ್ದ 47 ಮಂದಿಯನ್ನು ಈಗ ರಕ್ಷಿಸಲಾಗಿದೆ ಎಂದು ಲಾವೋಸ್‌ನಲ್ಲಿರುವ ರಾಯಭಾರ ಕಚೇರಿಯ ಪ್ರಕಟಣೆ ತಿಳಿಸಿದೆ.
ರಕ್ಷಿಸಲಾಗಿರುವ 47 ಮಂದಿಯ ಪೈಕಿ 29 ಜನರನ್ನು ಲಾವೋಸ್ ಅಧಿಕಾರಿಗಳು ರಾಯಭಾರ ಕಚೇರಿಯ ವಶಕ್ಕೆ ಒಪ್ಪಿಸಿದ್ದರು. ಇನ್ನುಳಿದ 18 ಮಂದಿ ಅವರಾಗಿಯೇ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು.