ಟೆಲ್ ಅವೀಲ್: ‘ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮಾಡುವ ಮೂಲಕ ಇರಾನ್ ಅತಿದೊಡ್ಡ ಪ್ರಮಾದ ಎಸಗಿದೆ. ಇದಕ್ಕಾಗಿ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.
ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಹತ್ಯೆ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ತೀವ್ರಗೊಂಡಿದ್ದು, ಮಂಗಳವಾರ ರಾತ್ರಿ ಇಸ್ರೇಲ್ ಮೇಲೆ ಇರಾನ್ 180 ಕ್ಷಿಪಣಿ ದಾಳಿ ನಡೆಸಿತ್ತು.
ಕ್ಷಿಪಣಿ ದಾಳಿ ಬೆನ್ನಲ್ಲೇ ಭದ್ರತಾ ಇಲಾಖೆಯ ಪ್ರಮುಖರ ಜೊತೆ ಸಭೆ ನಡೆಸಿದ ನೆತನ್ಯಾಹು, ಇರಾನ್ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.
‘ವಿಶ್ವದಲ್ಲೇ ಅತ್ಯಂತ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಹೊಂದಿದ್ದು, ಇರಾನ್ ಕ್ಷಿಪಣಿ ದಾಳಿಯನ್ನು ನಮ್ಮ ವಾಯುಪಡೆ ವಿಫಲಗೊಳಿಸಿದೆ. ಅದಕ್ಕಾಗಿ ಧನ್ಯವಾದಗಳು’ ಎಂದಿದ್ದಾರೆ.
ಇರಾನ್ ದಾಳಿಗೆ ತೀವ್ರ ಪ್ರತಿರೋಧ ಒಡ್ಡಿರುವ ಇಸ್ರೇಲ್, ಪ್ರತಿ ದಾಳಿ ಆರಂಭಿಸಿದೆ. ಇದರಿಂದ ಇಸ್ರೇಲ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಲಕ್ಷಾಂತರ ಜನ ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
‘ಹುತಾತ್ಮ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಅವರ ಹತ್ಯೆಗೆ ಪ್ರತೀಕಾರವಾಗಿ ಆಕ್ರಮಣಕಾರರ ಹೃದಯವನ್ನು ಗುರಿಯಾಸಿಕೊಂಡಿದ್ದೇವೆ’ ಎಂದು ಇರಾನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.