ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುವೇಷದಲ್ಲಿದ್ದ ಇಸ್ರೇಲ್‌ ಪಡೆಗಳಿಂದ ಮೂವರ ಹತ್ಯೆ

ಬಂಡುಕೋರರ ಮೇಲೆ ದಾಳಿ ನಡೆಸಿದ ಮಾರುವೇಷದಲ್ಲಿದ್ದ ಸಿಬ್ಬಂದಿ
Published 30 ಜನವರಿ 2024, 16:09 IST
Last Updated 30 ಜನವರಿ 2024, 16:09 IST
ಅಕ್ಷರ ಗಾತ್ರ

ಜೆನಿನ್‌ (ವೆಸ್ಟ್‌ಬ್ಯಾಂಕ್‌): ಮಹಿಳೆಯರು ಹಾಗೂ ವೈದ್ಯಕೀಯ ಕಾರ್ಯಕರ್ತರ ವೇಷ ಧರಿಸಿದ್ದ ಇಸ್ರೇಲ್‌ನ ಸಶಸ್ತ್ರ ಪಡೆಗಳ ಗುಂಪೊಂದು ಮಂಗಳವಾರ ವೆಸ್ಟ್‌ಬ್ಯಾಂಕ್‌ನ ಆಸ್ಪತ್ರೆಯೊಂದಕ್ಕೆ ನುಗ್ಗಿ, ಪ್ಯಾಲೆಸ್ಟೀನ್‌ನ ಮೂವರು ಬಂಡುಕೋರರನ್ನು ಹತ್ಯೆ ಮಾಡಿದ್ದಾರೆ.‌

ಈ ಘಟನೆಯಿಂದಾಗಿ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧ ಮತ್ತಷ್ಟು ಭೀಕರಗೊಳ್ಳಬಹುದೆಂಬ ಆತಂಕ ಸೃಷ್ಟಿಯಾಗಿದೆ.

‘ಜೆನಿನ್‌ ನಗರದಲ್ಲಿರುವ ಇಬ್ನ್‌ ಸಿನಾ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿವೆ’ ಎಂದು ಮಾಹಿತಿ ನೀಡಿರುವ ಪ್ಯಾಲಿಸ್ಟೀನ್‌ ಆರೋಗ್ಯ ಸಚಿವಾಲಯ ಘಟನೆಯನ್ನು ಖಂಡಿಸಿದೆ. ಅಲ್ಲದೇ, ಆಸ್ಪತ್ರೆಗಳಲ್ಲಿ ಇಂಥ ಕಾರ್ಯಾಚರಣೆಗಳನ್ನು ನಡೆಸದಂತೆ ಇಸ್ರೇಲ್‌ ಮಿಲಿಟರಿ ಮೇಲೆ ಒತ್ತಡ ಹೇರಬೇಕೆಂದೂ ಅದು ಅಂತರರಾಷ್ಟ್ರೀಯ ಸಮುದಾಯಕ್ಕೆ ಒತ್ತಾಯಿಸಿದೆ.

‘ಇಸ್ರೇಲ್‌ ಪಡೆಗಳ ಮೇಲೆ ಯಾವುದೇ ಪ್ರತಿದಾಳಿ ನಡೆದಿಲ್ಲ. ಇದೊಂದು ಉದ್ದೇಶಿತವಾಗಿ ನಡೆದ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಇಸ್ರೇಲ್‌ ಪಡೆಯು ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಮತ್ತು ಕಾವಲುಗಾರರ ಮೇಲೂ ದಾಳಿ ನಡೆಸಿವೆ. ಈ ಹಿಂದೆ ಆಸ್ಪತ್ರೆಯಲ್ಲಿ ಯಾರ ಹತ್ಯೆಯೂ ನಡೆದಿರಲಿಲ್ಲ. ಆದರೆ, ಈಗ ಇದೊಂದು ನಿದರ್ಶನವಾಗಿದೆ’ ಎಂದು ಆಸ್ಪತ್ರೆಯ ವಕ್ತಾರ ತೌಫಿಕ್ ಅಲ್-ಶೋಬಾಕಿ ಮಾಹಿತಿ ನೀಡಿದ್ದಾರೆ.

ಇಸ್ರೇಲ್‌ ಸಮರ್ಥನೆ: ‘ಬಂಡುಕೋರರು ಆಸ್ಪತ್ರೆಗಳನ್ನು ತಮ್ಮ ಅಡಗುತಾಣಗಳಾಗಿ ಬಳಸಿಕೊಳ್ಳುತ್ತಿದ್ದಾರೆ. ದಾಳಿಯಲ್ಲಿ ಹತ್ಯೆಯಾದವರಲ್ಲಿ ಒಬ್ಬರು 2023ರ ಅಕ್ಟೋಬರ್‌ 7ರಂದು ನಡೆದ ದಾಳಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ರವಾನಿಸಿದ್ದರು. ಅವರ ಈ ನಡೆ ಹಮಾಸ್‌ ಬಂಡುಕೋರರಿಂದ ಪ್ರೇರಿತವಾಗಿದೆ’ ಎಂದು ಇಸ್ರೇಲ್‌ ಮಿಲಿಟರಿ ಪಡೆ ಮಂಗಳವಾರ ಆರೋಪಿಸಿದೆ. 

ಹತ್ಯೆಯಾದ ಮೂವರು ತನ್ನ ಸದಸ್ಯರೆಂದು ಒಪ್ಪಿಕೊಂಡಿರುವ ಹಮಾಸ್‌, ‘ಇಸ್ರೇಲ್‌ ಪಡೆಗಳ ಕಾರ್ಯಾಚರಣೆಯು ಹೇಡಿತನದ ಕೃತ್ಯವಾಗಿದೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT