ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾಚಿಯಲ್ಲಿ ಚೀನಾ ರಾಯಭಾರಿ ಕಚೇರಿ ಸಿಬ್ಬಂದಿ ರಕ್ಷಿಸಿದ್ದು ಈ ಮಹಿಳಾ ಅಧಿಕಾರಿ

ಮಗಳನ್ನು ಇಂಗ್ಲಿಷ್ ಓದಿಸಿದ್ದಕ್ಕೆ ಅಪ್ಪ ಊರು ಬಿಡಬೇಕಾಯಿತು
Last Updated 24 ನವೆಂಬರ್ 2018, 6:20 IST
ಅಕ್ಷರ ಗಾತ್ರ

ಕರಾಚಿ: 'ಮಗಳಿಗೆ ಕೇವಲ ಧಾರ್ಮಿಕ ಶಿಕ್ಷಣ ಸಾಲದು, ಆಧುನಿಕ ಶಿಕ್ಷಣ ಸಿಗಬೇಕು ಎಂದು ಅಪ್ಪ ನನ್ನನ್ನು ಖಾಸಗಿಶಾಲೆಗೆ ಸೇರಿಸಿದರು. ಸಂಬಂಧಿಕರು, ನೆರೆಹೊರೆಯವರು ನಮ್ಮನ್ನು ದೂರ ಮಾಡಿದರು. ಆದರೆ ಅಪ್ಪ ಅಂಜಲಿಲ್ಲ. ಹುಟ್ಟಿದ ಊರನ್ನೇ ಬಿಟ್ಟು ಬೇರೊಂದು ಊರಲ್ಲಿ ನನಗೆ ಬದುಕುಕಟ್ಟಿಕೊಟ್ಟರು. ನನ್ನ ಎಲ್ಲ ಸಾಧನೆ ಅವರಿಗೆ ಅರ್ಪಣೆ...'

- ಹೀಗೆ ತಮ್ಮ ಬಾಲ್ಯ ನೆನಪಿಸಿಕೊಂಡು ಭಾವುಕರಾದವರು ಚೀನಾ ದೂತಾವಾಸದ ಸಿಬ್ಬಂದಿಯನ್ನು ಬಲೂಚ್ ಉಗ್ರರ ದಾಳಿಯಿಂದ ಕಾಪಾಡಿದ ಕರಾಚಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೈ ಅಜೀಜ್ ತಲ್ಪುರ್. ಉಗ್ರರ ನಿಗ್ರಹ ಮತ್ತು ದೂತಾವಾಸ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಇವರ ನೇತೃತ್ವದಲ್ಲಿ ನಡೆಯಿತು.ಇವರ ಸಾಧನೆಯನ್ನು ಇಡೀ ವಿಶ್ವ ಗಮನಿಸಿದೆ. ಬಾಲ್ಯದಲ್ಲಿ 'ಹೆಣ್ಣಿಗೇಕೆ ವಿದ್ಯಾಭ್ಯಾಸ' ಎಂದು ಜರಿದಿದ್ದವರೂ ಇಂದು ಹೆಮ್ಮೆಯಿಂದ 'ಇವಳು ನಮ್ಮ ಮನೆ ಮಗಳು' ಎಂದು ಬೀಗುತ್ತಿದ್ದಾರೆ.

ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ಚೀನಾದ ರಾಯಭಾರಿ ಕಚೇರಿಯ ಮೇಲೆ ಬಲೂಚಿಸ್ತಾನ್ ವಿಮುಕ್ತಿ ದಳದ ಉಗ್ರರು ಶುಕ್ರವಾರ ದಾಳಿ ಮಾಡಿದ್ದರು. ಒಂಭತ್ತು ಕೈಬಾಂಬು, ಆಹಾರ ಪದಾರ್ಥಗಳು, ರೈಫಲ್‌ಗಳನ್ನು ಹೊತ್ತು ದೂತಾವಾಸ ಪ್ರವೇಶಿಸಲು ಯತ್ನಿಸಿದ ಉಗ್ರರಿಗೆ ಅಲ್ಲಿನ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡು ತಮ್ಮ ಬೇಡಿಕೆ ಈಡೇರಿಸಿಕೊಳ್ಳುವ ಉದ್ದೇಶವಿತ್ತು.

ಭಯೋತ್ಪಾದಕರನ್ನು ಗುರುತಿಸಿದ ತಕ್ಷಣ ಅಧೀನ ಸಿಬ್ಬಂದಿಗೆ ಸನ್ನದ್ಧರಾಗಲು ಸೂಚಿಸಿದ ಸುಹೈ ರಕ್ಷಣೆಗೆ ಟೊಂಕಕಟ್ಟಿ ನಿಂತರು. ಆರಂಭದ ಕೆಲ ನಿಮಿಷದ ಪ್ರತಿರೋಧ ದೂತಾವಾಸದ ಸಿಬ್ಬಂದಿ ರಕ್ಷಣೆ ದೃಷ್ಟಿಯಿಂದ ಅಮೂಲ್ಯ ಎನಿಸಿತ್ತು. ಸ್ವಲ್ಪ ಹೊತ್ತಿನಲ್ಲೇ ಹೆಚ್ಚುವರಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸಿದರು.

ಸುಹೈ ಅಜೀಜ್ ತಲ್ಪುರ್ಯಾರು?

ಇದೀಗ ವಿಶ್ವದಲಕ್ಷಾಂತರ ಜನರು ಈ ಪ್ರಶ್ನೆಯನ್ನು ಗೂಗಲ್‌ಗೆ ಕೇಳುತ್ತಿದ್ದಾರೆ. ಗೂಗಲ್‌ನಲ್ಲಿSuhai Aziz Talpur ಎಂದು ಟೈಪ್ ಮಾಡಿದರೆ ಸಾಕು ಜನರು ಆಕೆಯ ವಿದ್ಯಾರ್ಹತೆ, ಗಳಿಸಿದ ಅಂಕಗಳು, ಮದುವೆಯಾಗಿದೆಯೇ? ಹುಟ್ಟಿದ ದಿನಾಂಕ ಹುಡುಕಿರುವುದಕ್ಕೆ ಸಾಕ್ಷಿಗಳು ಸಿಗುತ್ತವೆ.

ಸಿಂಧ್ ಪ್ರಾಂತ್ಯದ ತಂಡೊ ಮಹಮ್ಮದ್ ಖಾನ್ ಜಿಲ್ಲೆಯ ಭಾಯ್‌ ಖಾನ್ ತಲ್ಪುರ್ ಗ್ರಾಮದಲ್ಲಿ ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು ಸುಹೈ ಅಜೀಜ್ ತಲ್ಪುರ್. ಬರಹಗಾರರಾದ ತಂದೆ ಅಜೀಜ್ ತಲ್ಪುರ್ಅವರಿಗೆ ಮಗಳನ್ನು ವಿದ್ಯಾವಂತೆಯನ್ನಾಗಿ ಮಾಡುವ ಹಂಬಲ. ಮಗಳಿಗೂ ಓದಿ, ಸಾಧನೆ ಮಾಡುವ ತವಕ. ಆದರೆ ಇದಕ್ಕೆ ಸಂಬಂಧಿಕರ ವಿರೋಧ. ಆದರೂ ಅಪ್ಪ–ಮಗಳ ವಿದ್ಯಾಭ್ಯಾಸದ ಮೇಲಿನ ಒಲವು ಹುಟ್ಟಿದ ಊರನ್ನು ಬಿಡುವಂತೆ ಮಾಡಿತು. ಈ ಬೆಳವಣಿಗೆ ಅವರಲ್ಲಿ ಓದುವ ಕೆಚ್ಚು ಹೆಚ್ಚಿಸಿತೇ ಹೊರತು,ಉತ್ಸಾಹವನ್ನು ಕುಂದಿಸಲಿಲ್ಲ. ಆತ್ಮವಿಶ್ವಾಸವನ್ನು ತಗ್ಗಿಸಲಿಲ್ಲ.

ಗೂಗಲ್‌ನಲ್ಲಿ ಸುಹೈ ಅಜೀಜ್‌ ಎಂದು ಟೈಪಿಸಿದಾಗ ಬರುವ ಆಟೊ ಸಜೆಶನ್‌ಗಳು
ಗೂಗಲ್‌ನಲ್ಲಿ ಸುಹೈ ಅಜೀಜ್‌ ಎಂದು ಟೈಪಿಸಿದಾಗ ಬರುವ ಆಟೊ ಸಜೆಶನ್‌ಗಳು

ಬೇಡ ಎನ್ನುವುದರ ನಡುವೆ ಬೇಕು ಎಂಬುದಕ್ಕೆ ಹೆಜ್ಜೆ ಇಟ್ಟ ಸುಹೈ ತಂಡೊ ಮಹಮ್ಮದ್ ಖಾನ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಬಹ್ರಿಯಾ ಫೌಂಡೇಶನ್‌ನಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿದರು. ಬಳಿಕ ಪಾಕಿಸ್ತಾನದ ಹೈದರಾಬಾದ್‌ನಲ್ಲಿರುವಜುಬೈದಾ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನೂ ಪಡೆದರು.

'ನನ್ನನ್ನು ಚಾರ್ಟೆಡ್ ಅಕೌಂಟೆಟ್‌ ಆಗಿನೋಡಬೇಕೆಂದು ಕುಟುಂಬ ಬಯಸಿತ್ತು. ಆದರೆ ಸದಾ ಸಾಮಾಜಿಕ ಚಿಂತನೆಯಲ್ಲಿದ್ದ ನನಗೆ ಈ ವೃತ್ತಿಯಲ್ಲಿ ಸಮಾಜ ಸೇವಾ ಮೌಲ್ಯಗಳು ಕಾಣಲಿಲ್ಲ. ಹಾಗಾಗಿ ನಾನು ಸಿಎಸ್‌ಎಸ್‌ (Central Superior Service Exam) ಪರೀಕ್ಷೆಯನ್ನು ಬರೆದೆ. ನನ್ನ ಪೋಷಕರಿಗೆ ಸಮಾಜದ ಕಷ್ಟಕ್ಕೆ ಮಿಡಿಯುವ ಮನಸ್ಸು ಇತ್ತು.ನಾನು ಮಗುವಾಗಿದ್ದಾಗಿನಿಂದಲೂ ಇದೇ ಸ್ವಭಾವ ನನ್ನಲ್ಲಿ ಬೆಳೆಯುವಂತೆ ಗಮನಕೊಟ್ಟರು.ಕವಿತೆಗಳನ್ನು ಕೇಳುತ್ತಾ ಬೆಳೆದ ನನಗೆ ಸಾಹಿತ್ಯ, ಇತಿಹಾಸದ ಕಡೆ ಆಸಕ್ತಿ ಮೊಳೆಯಿತು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಇವೆಲ್ಲವೂಪೂರಕವಾದವು' ಎಂದು ತಮ್ಮ ಬಾಲ್ಯ ಮತ್ತುವಿದ್ಯಾಭ್ಯಾಸದ ಹಾದಿಯನ್ನು ನೆನೆಸಿಕೊಳ್ಳುತ್ತಾರೆ ಸುಹೈ.

‘ನನ್ನ ಮಗಳು ಸುಹೈಗೆ ಧಾರ್ಮಿಕ ಶಿಕ್ಷಣ ಕೊಡಿಸುವ ಇಂಗಿತ ಸಂಬಂಧಿಕರದಾಗಿತ್ತು. ಇದಕ್ಕೆ ನನ್ನ ಸಮ್ಮತಿಯಿರಲಿಲ್ಲ. ಹಾಗಾಗಿ ಈ ವಿಚಾರಕ್ಕೆ ಸಂಬಂಧಿಕರು ನನ್ನ ಕುಟುಂಬದೊಟ್ಟಿಗಿನ ಸಂಬಂಧವನ್ನು ಕಡಿದುಕೊಂಡರು. ಆದರೆ ನನ್ನ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಮಾತ್ರ ನನ್ನ ಉದ್ದೇಶವಾಗಿತ್ತು ಎಂದು ಹೇಳಿಕೊಳ್ಳುತ್ತಾರೆ’ ತಂದೆ ಅಜೀಜ್ ತಲ್ಪುರ್.

(ಮಾಹಿತಿ: ವಿವಿಧ ವೆಬ್‌ಸೈಟ್ ಮತ್ತು ಸುದ್ದಿಸಂಸ್ಥೆಗಳು. ಬರಹ:ವನಿತಾ ಜೈನ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT