ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್‌: ಮಾನವ ಹಕ್ಕುಗಳ ವಕೀಲರಾಗಿದ್ದ ಕೀರ್ ಸ್ಟಾರ್ಮರ್ ಈಗ ಪ್ರಧಾನಿ

Published 5 ಜುಲೈ 2024, 16:22 IST
Last Updated 5 ಜುಲೈ 2024, 16:22 IST
ಅಕ್ಷರ ಗಾತ್ರ

ಲಂಡನ್‌: ವೃತ್ತಿಯಿಂದ ವಕೀಲರಾಗಿದ್ದ ಕೀರ್‌ ಸ್ಟಾರ್ಮರ್‌, ಮಾನವ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳಿಂದಾಗಿ ಪ್ರಸಿದ್ಧ. ತಮ್ಮ ಹೋರಾಟಗಳ ಮೂಲಕವೇ ರಾಜಕೀಯ ಪ್ರವೇಶಿಸಿದ ಕೀರ್‌, ಲೇಬರ್‌ ಪಕ್ಷದ ನಾಯಕರಾಗಿ ಹೊರಹೊಮ್ಮಿದರು. ಪಕ್ಷವನ್ನು ಪುನರ್‌ ಸಂಘಟಿಸಿ, ಈಗ ಪ್ರಧಾನಿ ಪಟ್ಟಕ್ಕೇರಿದ್ದಾರೆ.

ಕಾನೂನು ಮತ್ತು ಕ್ರಿಮಿನಲ್‌ ನ್ಯಾಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳಿಗಾಗಿ ಕೀರ್‌ ಅವರು ರಾಣಿ 2ನೇ ಎಲಿಜಬೆತ್ ಅವರಿಂದ ನೈಟ್‌ ಪದವಿ ಪಡೆದಿದ್ದಾರೆ. 2015ರಲ್ಲಿ ಮೊದಲ ಬಾರಿಗೆ ಲೇಬರ್ ಪಕ್ಷದಿಂದ ಸ್ಪರ್ಧಿಸಿ, ಸಂಸತ್‌ಗೆ ಆಯ್ಕೆಯಾಗಿದ್ದರು.

2019ರಲ್ಲಿ ನಡೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಪಕ್ಷದ ಚುಕ್ಕಾಣಿ ಹಿಡಿದ ಕೀರ್, ತಳಮಟ್ಟದಿಂದ ಪಕ್ಷವನ್ನು ಮತ್ತೆ ಸಂಘಟಿಸಿ, ಗೆಲುವಿನ ದಡ ಮುಟ್ಟಿಸಿದ್ದಾರೆ. ಬ್ರೆಕ್ಸಿಟ್‌ನ ಕಡು ವಿರೋಧಿಯಾದ ಕೀರ್‌, ಈ ವಿಚಾರವಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರು.

ಕೀರ್‌ ಸ್ಟಾರ್ಮರ್‌ ಲಂಡನ್‌ನಲ್ಲಿ ಜನಿಸಿದ್ದಾರೆ. ತಂದೆ ರಾಡ್ನಿ ಅವರು ಟೂಲ್‌ ಮೇಕರ್‌ ಆಗಿದ್ದರೆ, ತಾಯಿ ಜೋಸೆಫೈನ್ ನರ್ಸ್ ಆಗಿದ್ದರು. ತಾಯಿ ಜೋಸೆಫೈನ್, ಅನಾರೋಗ್ಯದಿಂದಾಗಿ 2015ರಲ್ಲಿ ಮೃತಪಟ್ಟರು.

ಸರ‍್ರೆಯಲ್ಲಿರುವ ಆಕ್ಸ್‌ಟೆಡ್‌ ಪಟ್ಟಣದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. ಪದವಿ ನಂತರ ‘ಪಬ್ಲಿಕ್‌ ಪ್ರಾಸಿಕ್ಯೂಷನ್ಸ್‌’ನ ನಿರ್ದೇಶಕರಾಗಿ ವೃತ್ತಿ ಆರಂಭಿಸಿದರು.

ಪತ್ನಿ ವಿಕ್ಟೋರಿಯಾ ಅವರು ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್‌)ಯಲ್ಲಿ ಉದ್ಯೋಗಿಯಾಗಿದ್ದಾರೆ. ಕೀರ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

‘ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ನನ್ನ ತಂದೆಯನ್ನು ಸಾಕಷ್ಟು ಅವಮಾನಿಸಲಾಯಿತು. ಅವಮಾನ ಸಹಿಸದೇ ಅವರು ಕಂಪನಿಯನ್ನು ತೊರೆದರು. ಅವರಿಗೆ ಅಗೌರವ ತೋರುತ್ತಿದ್ದುದನ್ನು ನಾನು ಮರೆತಿಲ್ಲ’ ಎಂದು ಇತ್ತೀಚೆಗೆ ಸಂಡೆ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

‘ತಂದೆ ಅನುಭವಿಸಿದ ಅವಮಾನವನ್ನು ನಾನು ನೋಡಿದ್ದೇನೆ. ಯಾವ ವ್ಯಕ್ತಿಯನ್ನೂ ನಾನು ಅಗೌರವದಿಂದ ಕಾಣದೇ ಇರುವುದಕ್ಕೆ ಇದೂ ಒಂದು ಕಾರಣ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT