ಇಸ್ಲಾಮಾಬಾದ್: ಕಳೆದ ವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಎರಡು ಸಾವಿರಕ್ಕೂ ಹೆಚ್ಚು ಜನರ ಜೀವಹಾನಿಯಾದ ಅಫ್ಗಾನಿಸ್ತಾನದ ಪಶ್ಚಿಮ ಭಾಗದಲ್ಲಿ ಭಾನುವಾರ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ.
ಈವರೆಗೆ ಒಬ್ಬರು ಸಾವನ್ನಪ್ಪಿದ್ದು, ಸುಮಾರು 150 ಜನರು ಗಾಯಗೊಂಡಿದ್ದಾರೆ. ಸಾವು–ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಹೆರಾತ್ ಪ್ರಾಂತ್ಯದ ತುರ್ತು ಪರಿಹಾರ ತಂಡದ ಮುಖ್ಯಸ್ಥ ಮೊಹಮ್ಮದ್ ಜಹೀರ್ ನೂರ್ಝೈ ಹೇಳಿದ್ದಾರೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯು, ಭೂಕಂಪದ ಕೇಂದ್ರಬಿಂದುವು ಪ್ರಾಂತೀಯ ರಾಜಧಾನಿ ಹೆರಾತ್‌ನ ಹೊರಗೆ ಸುಮಾರು 34 ಕಿಲೋಮೀಟರ್ (21 ಮೈಲಿ) ಮತ್ತು ಮೇಲ್ಮೈಯಿಂದ ಎಂಟು ಕಿಲೋಮೀಟರ್ ಆಳದಲ್ಲಿತ್ತು ಎಂದು ಹೇಳಿದೆ.
ಅ.7 ರಂದು ಸಂಭವಿಸಿದ ಭೂಕಂಪ ಮತ್ತು ನಂತರದ ಕಂಪನಗಳಿಂದ ಹೆರಾತ್‌ನ ಹಲವು ಹಳ್ಳಿಗಳು ಸಂಪೂರ್ಣ ನೆಲಸಮಗೊಂಡಿದ್ದವು. ಅದೇ ಪ್ರದೇಶದಲ್ಲಿ ಮತ್ತೆ ಭೂಕಂಪ ಸಂಭವಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.