ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌: ಪಾಕಿಸ್ತಾನದ ಎಂಕ್ಯೂಎಂ ನಾಯಕ ಹುಸೇನ್‌ ಬಂಧನ

Last Updated 11 ಜೂನ್ 2019, 16:46 IST
ಅಕ್ಷರ ಗಾತ್ರ

ಲಂಡನ್‌: ರಾಷ್ಟ್ರ ವಿರೋಧಿ ಭಾಷಣ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಅತಿ ದೊಡ್ಡ ರಾಜಕೀಯ ಪಕ್ಷಗಳಲ್ಲೊಂದಾದ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್‌ (ಎಂಕ್ಯೂಎಂ) ನಾಯಕ, ಗಡೀಪಾರಾಗಿರುವ ಅಲ್ತಾಫ್‌ ಹುಸೇನ್‌ ಅವರನ್ನು ಇಲ್ಲಿನ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹುಸೇನ್‌ ಅವರು 2016ರ ಆಗಸ್ಟ್‌ 22 ರಂದು ಮಾಡಿದ್ದ ಭಾಷಣದಲ್ಲಿ, ‘ಪಾಕಿಸ್ತಾನವು ಉಗ್ರರ ಕೇಂದ್ರವಾಗಿದೆ’ ಮತ್ತು ‘ಈ ದೇಶವು ಇಡೀ ಪ್ರಪಂಚಕ್ಕೆ ಕ್ಯಾನ್ಸರ್‌’ ಆಗಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಎಂಕ್ಯೂಎಂ ಪಾರ್ಟಿಯ ಭಾಷಣ ಕುರಿತು ತನಿಖೆ ನಡೆಸಿದಾಗ ಈ ಪ್ರಕರಣ ಗೊತ್ತಾಗಿದ್ದು, 60 ವರ್ಷ ವಯಸ್ಸಿನ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಕರಾಚಿಯ ರಾಜಕೀಯದಲ್ಲಿ 30 ವರ್ಷಗಳಿಂದ ಎಂಕ್ಯೂಎಂ ಪ್ರಾಬಲ್ಯ ಹೊಂದಿದೆ. ಪಾಕಿಸ್ತಾನದಿಂದ ಗಡೀಪಾರಾದ ನಂತರ 1990ರಲ್ಲಿ ಆಶ್ರಯ ಬಯಸಿ ಇಂಗ್ಲಂಡ್‌ಗೆ ಬಂದ ಹುಸೇನ್‌, ನಂತರ ಅಲ್ಲಿನ ಪೌರತ್ವ ಪಡೆದಿದ್ದಾರೆ. ಅಂದಿನಿಂದಲೂ ಅವರು ಎಂಕ್ಯೂಎಂ ಮೇಲೆ ಪ್ರಬಲ ಹಿಡಿತ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಹುಸೇನ್‌ ಬಂಧನ ಖಚಿತವಾಗುತ್ತಿದ್ದಂತೆ ಕರಾಚಿ ನಗರದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್‌ ಮುಖ್ಯಸ್ಥ ಅಮೀರ್‌ ಅಹ್ಮದ್‌ ಶೇಖ್‌ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಉತ್ತರ ಲಂಡನ್‌ದಲ್ಲಿರುವ ಹುಸೇನ್‌ ಅವರ ನಿವಾಸದಲ್ಲಿಯೇ ಅವರನ್ನು ಬಂಧಿಸಿರುವ ಪೊಲೀಸರು, ದಕ್ಷಿಣ ಲಂಡನ್‌ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT