ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಹಿತ ನೌಕೆ ಸ್ಪರ್ಧೆ: ಭಾರತದ 3 ತಂಡಗಳಿಗೆ ಪ್ರಶಸ್ತಿ

ಬಾಹ್ಯಾಕಾಶಕ್ಕೆ ಮಾನವಸಹಿತ ನೌಕೆ ನಿರ್ಮಾಣ
Last Updated 15 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅನ್ಯಗ್ರಹಗಳಿಗೆ ಮಾನವ ಸಹಿತ ನೌಕೆ ಕಳುಹಿಸುವ (ಹ್ಯೂಮನ್‌ ಎಕ್ಸ್‌ಪ್ಲೊರೇಷನ್‌ ರೋವರ್‌ ಚಾಲೆಂಜ್‌) ವಾಹನ ನಿರ್ಮಾಣದ ಸ್ಪರ್ಧೆಯಲ್ಲಿ ಭಾರತದ ಮೂರು ತಂಡಗಳು ಪ್ರಶಸ್ತಿ ಗೆದ್ದಿವೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಸ್ಪರ್ಧೆ ಏರ್ಪಡಿಸಿತ್ತು. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಂದ್ರ, ಮಂಗಳ ಮತ್ತು ಇತರ ಗ್ರಹಗಳಿಗೆ ಹೋಗುವ ನೌಕೆಗಳ ಮಾದರಿಯನ್ನು ಈ ವಿದ್ಯಾರ್ಥಿಗಳು ರೂಪಿಸಿದ್ದರು.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಕೆಐಇಟಿ ಸಮೂಹ ಸಂಸ್ಥೆಗಳ ತಂಡವು ‘ಎಐಎಎ ನೀಲ್‌ ಆರ್ಮ್‌ಸ್ಟ್ರಾಂಗ್‌ ಉತ್ತಮ ವಿನ್ಯಾಸ ಪ್ರಶಸ್ತಿ’ ಪಡೆದಿದೆ. ಕಾರ್ಯಕ್ಷಮತೆಯ ಸಂದರ್ಭ ಎದುರಾಗುವ ಸವಾಲುಗಳನ್ನು ನಿವಾರಿಸುವಲ್ಲಿ ಈ ವಿನ್ಯಾಸ ಪೂರಕವಾಗಿದೆ ಎಂದು ನಾಸಾ ಹೇಳಿದೆ.

ಮುಂಬೈನ ಸ್ಕೂಲ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೆಜ್‌ಮೆಂಟ್‌ನ ಮುಕೇಶ್‌ ಪಟೇಲ್‌ ಅವರು, ‘ ಫ್ರಾಂಕ್‌ ಜೋ ಸೆಕ್ಸ್‌ಟಾನ್‌ ಮೆಮೋರಿಯಲ್‌ ಪಿಟ್‌ ಕ್ರೂ ಪ್ರಶಸ್ತಿ’ ಪಡೆದರು. ಬಾಹ್ಯಾಕಾಶ ವಾಹನ ಸಂಚಾರದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ಕುರಿತ ಉಪಾಯಗಳನ್ನು ಅವರು ಸೂಚಿಸಿದ್ದಾರೆ. ಇದನ್ನು ‘ವ್ಯವಸ್ಥೆಯ ಸುರಕ್ಷತಾ ಸವಾಲಿನ ಪ್ರಶಸ್ತಿ’ ಎಂದೂ ಕರೆಯಲಾಗುತ್ತದೆ.

ಪಂಜಾಬ್‌ನ ಫಗ್ವಾರಾದ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯದ ತಂಡವು ‘ಸ್ಟೆಮ್‌ ಎಂಗೇಜ್‌ಮೆಂಟ್‌ ಪ್ರಶಸ್ತಿ’ ಪಡೆದಿದೆ. ಬಾಹ್ಯಾಕಾಶಕ್ಕೆ ರಾಕೆಟ್‌ ಉಡಾಯಿಸುವ ಕುರಿತು ಉತ್ತಮವಾಗಿ ಮಾಹಿತಿ ಪ್ರಸ್ತುತಪಡಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ನಾಸಾ ಹೇಳಿದೆ.

ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT