ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ, ಚೀನಾ ದಾಳಿ ಭೀತಿ: ಅಣ್ವಸ್ತ್ರ ಬಳಕೆಗೆ ನ್ಯಾಟೊ ರಾಷ್ಟ್ರಗಳ ಸಿದ್ಧತೆ

Published 17 ಜೂನ್ 2024, 14:17 IST
Last Updated 17 ಜೂನ್ 2024, 14:17 IST
ಅಕ್ಷರ ಗಾತ್ರ

ಲಂಡನ್‌: ಆಕ್ರಮಣ ಕುರಿತಂತೆ ರಷ್ಯಾ ಮತ್ತು ಚೀನಾದಿಂದ ಇರುವ ನಿರಂತರ ಬೆದರಿಕೆಯ ಹಿಂದೆಯೇ, ದಾಸ್ತಾನಿನಲ್ಲಿರುವ ಅಣ್ವಸ್ತ್ರಸಜ್ಜಿತ ಶಸ್ತ್ರಾಸ್ತ್ರಗಳನ್ನು ಬಳಕೆಗೆ ಸಜ್ಜುಗೊಳಿಸಲು ‘ನ್ಯಾಟೊ’ ಸದಸ್ಯ ರಾಷ್ಟ್ರಗಳು ಸಿದ್ಧತೆ ಆರಂಭಿಸಿವೆ.

‘ಸಂಭವನೀಯ ದಾಳಿ ತಡೆಗೆ ಕ್ರಮ ಕೈಗೊಳ್ಳಲು ಮತ್ತು ಅಣ್ವಸ್ತ್ರ ಸಜ್ಜಿತ ಶಸ್ತ್ರಾಸ್ತ್ರ ಬಳಕೆ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ನ್ಯಾಟೊ ಬದ್ಧವಾಗಿದೆ. ದಾಸ್ತಾನಿನಲ್ಲಿರುವ ಅಣ್ವಸ್ತ್ರಗಳ ಬಳಕೆ ಬಗ್ಗೆ ಸದಸ್ಯ ರಾಷ್ಟ್ರಗಳ ಜತೆಗೆ ನೇರ ಚರ್ಚೆ ನಡೆದಿದೆ’ ಎಂದು ನ್ಯಾಟೊ ಮುಖ್ಯಸ್ಥ ಜೆನ್ಸ್ ಸ್ಟಾಲ್ಟೆನ್‌ಬರ್ಗ್ ಹೇಳಿದರು.

‘ಅಣ್ವಸ್ತ್ರಗಳ ನಿರ್ವಹಣೆಯ ವಿವರಗಳನ್ನು ಹೇಳಲು ನಾನು ಬಯಸುವುದಿಲ್ಲ. ಆದರೆ, ಎಷ್ಟು ಅಣ್ವಸ್ತ್ರ ಸಿಡಿತಲೆಗಳು ಬಳಕೆಗೆ ಸಿದ್ಧ ಇವೆ,  ಎಷ್ಟನ್ನು ಸಜ್ಜಾಗಿಡಬೇಕು ಎಂಬ ಬಗ್ಗೆ ಚರ್ಚೆ ಅಗತ್ಯವಾಗಿದೆ. ಅದನ್ನೇ ಈಗ ಮಾಡುತ್ತಿದ್ದೇವೆ’ ಎಂದು ದೈನಿಕವೊಂದಕ್ಕೆ ತಿಳಿಸಿದ್ದಾರೆ.

ನಾವು ಅಣ್ವಸ್ತ್ರ ಮೈತ್ರಿಯನ್ನು ಹೊಂದಿದ್ದೇವೆ ಎಂಬ ಸಂದೇಶವನ್ನು ರವಾನಿಸಲು ಈಗ ಪಾರದರ್ಶಕವಾದ ಚರ್ಚೆಯು ಹೆಚ್ಚು ನೆರವಾಗಲಿದೆ ಎಂದು ಅವರು ‌ಪ್ರತಿಪಾದಿಸಿದ್ದಾರೆ.

‘ಅಣ್ವಸ್ತ್ರರಹಿತ ಜಗತ್ತಿನ ನಿರ್ಮಾಣವೇ ನ್ಯಾಟೊ ಗುರಿ. ಆದರೆ, ಎಷ್ಟು ಕಾಲ ಅಣ್ವಸ್ತ್ರ ಸಜ್ಜಿತ ಶಸ್ತ್ರಾಸ್ತ್ರಗಳು ಇರುತ್ತವೆಯೋ ಅಲ್ಲಿಯವರೆಗೂ ನಮ್ಮದು ಅಣ್ವಸ್ತ್ರ ಮೈತ್ರಿ ಆಗಿರಲಿದೆ. ರಷ್ಯಾ, ಚೀನಾ, ಉತ್ತರ ಕೊರಿಯಾ ರಾಷ್ಟ್ರಗಳ ಬಳಿ ಅಣ್ವಸ್ತ್ರಗಳಿವೆ. ಹೀಗಿರುವಾಗ ನ್ಯಾಟೊ ರಾಷ್ಟ್ರಗಳಲ್ಲಿ ಇಲ್ಲ ಎಂದಾದರೆ ಅಂತಹ ಸ್ಥಿತಿ ಹೆಚ್ಚು ಅಪಾಯಕಾರಿ ಎನಿಸಲಿದೆ’ ಎಂದು ಪ್ರತಿಕ್ರಿಯಿಸಿದರು.

ಅಣ್ವಸ್ತ್ರ ಸಜ್ಜಿತ ಶಸ್ತ್ರಾಸ್ತ್ರಗಳು ನ್ಯಾಟೊ ಪಾಲಿಗೆ ಭದ್ರತಾ ಖಾತರಿಯಾಗಿವೆ. ಅದರ ಉದ್ದೇಶ ಶಾಂತಿಯನ್ನು ಕಾಪಾಡಿಕೊಳ್ಳುವುದೇ ಆಗಿದೆ ಎಂದು ಸ್ಟಾಲ್ಟೆನ್‌ಬರ್ಗ್‌ ಅವರು ಪ್ರತಿಪಾದಿಸಿದರು.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು, ಪ್ರತಿಕೂಲ ಸಂದರ್ಭಗಳಲ್ಲಿ ರಷ್ಯಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಣ್ವಸ್ತ್ರಗಳನ್ನು ಬಳಸಬಹುದು ಎಂದು ಇತ್ತೀಚೆಗೆ ಪದೇ ಪದೇ ಎಚ್ಚರಿಕೆ ನೀಡಿದ್ದರು.

ಅಮೆರಿಕ ಮತ್ತು ಐರೋಪ್ಯ ಮೈತ್ರಿ ರಾಷ್ಟ್ರಗಳು ಜಗತ್ತನ್ನು ಅಣ್ವಸ್ತ್ರ ಸಂಘರ್ಷಕ್ಕೆ ದೂಡುತ್ತಿವೆ. ಉಕ್ರೇನ್‌ಗೆ ಸಾಕಷ್ಟು ಶಸ್ತ್ರಾಸ್ತ್ರ ಮಾರಿದ್ದು, ಈ ಪೈಕಿ ಕೆಲವನ್ನು ರಷ್ಯಾದ ಭೌಗೋಳಿಕ ಗಡಿಯಲ್ಲೂ ಬಳಸಬಹುದಾಗಿದೆ ಎಂದು ರಷ್ಯಾ ಆತಂಕ ವ್ಯಕ್ತಪಡಿಸಿತ್ತು. 

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ನ್ಯಾಟೊ ಪಾತ್ರ ಮಹತ್ವದ್ದಾಗಿತ್ತು. ಆದರೆ, ಶಸ್ತ್ರಾಸ್ತ್ರಗಳ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿರಲಿಲ್ಲ. 

ಪರಿಸ್ಥಿತಿ ಉದ್ವಿಗ್ನಗೊಳಿಸುವ ಹೇಳಿಕೆ: ರಷ್ಯಾ

ಮಾಸ್ಕೊ: ಅಣ್ವಸ್ತ್ರ ಸಜ್ಜಿತ ಶಸ್ತ್ರಾಸ್ತ್ರಗಳ ಹೆಚ್ಚಿನ ನಿಯೋಜನೆ ಕುರಿತು ನ್ಯಾಟೊ ಮುಖ್ಯಸ್ಥರ ಹೇಳಿಕೆಯು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಲಿದೆ ಎಂದು ರಷ್ಯಾ ಪ್ರತಿಕ್ರಿಯಿಸಿದೆ.

ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಅವರು ‘ಸ್ಟಾಂಟೆನ್‌ಬರ್ಗ್ ಅವರ ಹೇಳಿಕೆಯು ಇತ್ತೀಚೆಗೆ ಉಕ್ರೇನ್‌ ಸಮ್ಮೇಳನದಲ್ಲಿನ ಘೋಷಣೆಗೆ ವಿರುದ್ಧವಾದುದು. ಹೀಗಾಗಿ ಅಣ್ವಸ್ತ್ರಗಳ ಬಳಕೆ ಕುರಿತ ಯಾವುದೇ ಹೇಳಿಕೆಯೂ ಸ್ವೀಕಾರಾರ್ಹವಲ್ಲ’ ಎಂದು ಹೇಳಿದರು. 

‘ಇದು ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವುದಲ್ಲದೇ ಮತ್ತೇನೂ ಅಲ್ಲ’ ಎಂದು ಡಿಮಿಟ್ರಿ ಪೆಸ್ಕೊವ್ ಹೇಳಿದರು. ಅಮೆರಿಕವು ಸುಮಾರು 100 ‘ಬಿ61’ ಮಾದರಿಯ ಶಸ್ತ್ರಾಸ್ತ್ರಗಳನ್ನು ಐದು ಯುರೋಪಿಯನ್‌ ರಾಷ್ಟ್ರಗಳಾದ ಇಟಲಿ ಜರ್ಮನಿ ಟರ್ಕಿ ಬೆಲ್ಜಿಯಂ ಮತ್ತು ನೆದರ್ಲೆಂಡ್‌ ಬಳಿ ಇರಿಸಿದೆ ಎನ್ನಲಾಗಿದೆ. ಅಲ್ಲದೆ ಅಮೆರಿಕ ಬಳಿ ಇಂತಹ 100 ಶಸ್ತ್ರಾಸ್ತ್ರಗಳಿವೆ ಎನ್ನಲಾಗಿದೆ. ರಷ್ಯಾದ ಬಳಿ ಸುಮಾರು 1558 ಅಣ್ವಸ್ತ್ರ ಸಿಡಿತಲೆಗಳಿವೆ ಎಂದು ವರದಿ ತಿಳಿಸಿದೆ. 

ರಷ್ಯಾ ಮತ್ತು ಅಮೆರಿಕ ಜಗತ್ತಿನಲ್ಲಿಯೇ ಹೆಚ್ಚು ಅಣ್ವಸ್ತ್ರಗಳಿರುವ ರಾಷ್ಟ್ರಗಳಾಗಿದ್ದು ಜಗತ್ತಿನ ಒಟ್ಟು ಶಸ್ತ್ರಾಸ್ತ್ರಗಳಲ್ಲಿ ಶೇ 88ರಷ್ಟು ಈ ಎರಡು ರಾಷ್ಟ್ರಗಳ ಬಳಿಯೇ ಇದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT