ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಪಾಳ: 12ರಂದು ಪ್ರಚಂಡ ವಿಶ್ವಾಸಮತ ಯಾಚನೆ

Published 5 ಜುಲೈ 2024, 14:32 IST
Last Updated 5 ಜುಲೈ 2024, 14:32 IST
ಅಕ್ಷರ ಗಾತ್ರ

ಕಠ್ಮಂಡು: ಪ್ರಮುಖ ಮಿತ್ರ ಪಕ್ಷಗಳು ಬೆಂಬಲ ವಾಪಸ್‌ ಪಡೆದಿರುವ ಬೆನ್ನಲ್ಲೇ ನೇಪಾಳ ಪ್ರಧಾನಿ ಪುಷ್ಪ‍ ಕಮಲ್‌ ದಹಲ್ ’ಪ್ರಚಂಡ‘ ಅವರು ಜುಲೈ 12ರಂದು ವಿಶ್ವಾಸಮತ ಯಾಚಿಸಲಿದ್ದಾರೆ.

ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಸಿದ್ಧತೆ ನಡೆಸುವಂತೆ ಸಚಿವಾಲಯಕ್ಕೆ ಪ್ರಧಾನಿ ಪತ್ರ ಬರೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.  

ಪ್ರಚಂಡ ಸರ್ಕಾರದ ಭಾಗವಾಗಿದ್ದ ಕೆ.ಪಿ ಶರ್ಮ ಒಲಿ ನೇತೃತ್ವದ ಕಮ್ಯುನಿಷ್ಟ್‌ ಪಾರ್ಟಿ ಆಫ್‌ ನೇಪಾಳ್– ಯುನಿಫೈಡ್‌ ಮಾರ್ಕ್ಸಿಸ್ಟ್‌ ಲೆನಿನಿಸ್ಟ್ (ಸಿಪಿಎನ್‌–ಯುಎಮ್‌ಎಲ್) ಪಕ್ಷವು ಶೇರ್ ಬಹದ್ದೂರ್‌ ದೆವುಬಾ ಅವರ ಅಧ್ಯಕ್ಷತೆಯ ನೇಪಾಳಿ ಕಾಂಗ್ರೆಸ್‌ನೊಂದಿಗೆ ಸೇರಿ  ಹೊಸ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿರುವುದರಿಂದ ಪ್ರಚಂಡ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. 

ತಮ್ಮ ಸಂಪುಟದ 8 ಸಚಿವರು ರಾಜೀನಾಮೆ ನೀಡಿದ ಬಳಿಕವೂ ’ಪ್ರಚಂಡ’ ಅವರು,‘ವಿಶ್ವಾಸಮತ ಯಾಚನೆ ಮಾಡದೇ ರಾಜೀನಾಮೆ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ನೇಪಾಳ ಸಂಸತ್ತಿನ 275 ಸ್ಥಾನಗಳಲ್ಲಿ ದೊಡ್ಡ ಪಕ್ಷವಾಗಿರುವ ನೇಪಾಳಿ ಕಾಂಗ್ರೆಸ್‌ 89 ಸ್ಥಾನಗಳನ್ನು ಹೊಂದಿದ್ದು, ಸಿಪಿಎನ್‌–ಯುಎಮ್‌ಎಲ್‌ಗೆ 78 ಸ್ಥಾನಗಳಿವೆ. ಪ್ರಚಂಡ ನೇತೃತ್ವದ ಕಮ್ಯುನಿಷ್ಟ್ ಪಾರ್ಟಿ ಆಫ್‌ –ಮಾವೋವಾದಿ ಕೇಂದ್ರಿತ (ಸಿಪಿಎನ್‌–ಎಮ್‌ಸಿ) ಪಕ್ಷ 32 ಸ್ಥಾನಗಳನ್ನು ಹೊಂದಿದೆ.

ಸರ್ಕಾರ ಉಳಿಸಿಕೊಳ್ಳಲು ಪ್ರಚಂಡ ಅವರಿಗೆ ಕನಿಷ್ಠ 138 ಜನ ಸದಸ್ಯರ ಬೆಂಬಲದ ಅಗತ್ಯವಿದೆ. 10 ಸಂಸದರನ್ನು ಹೊಂದಿರುವ  ಸಿಪಿಎನ್‌– ಯುನಿಫೈಡ್‌ ಸೋಷಿಯಲಿಸ್ಟ್‌ ಪಕ್ಷವು ಪ್ರಚಂಡ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. 

ಒಂದು ವರ್ಷ ಆರು ತಿಂಗಳ ಅಧಿಕಾರ ಅವಧಿಯಲ್ಲಿ ಪ್ರಚಂಡ ಅವರು 5ನೇ ಬಾರಿಗೆ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಅಸ್ಥಿರ ರಾಜಕೀಯ ವ್ಯವಸ್ಥೆ ಹೊಂದಿರುವ ನೇಪಾಳದಲ್ಲಿ 16 ವರ್ಷಗಳಲ್ಲಿ 13 ಸರ್ಕಾರಗಳು ರಚನೆಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT