ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟ ಗಾತ್ರದ ರೋಬೊ ಅಭಿವೃದ್ಧಿ

ಮನುಷ್ಯನ ತೂಕ ಹೊರಬಲ್ಲ ಜಿರಳೆ ವೇಗದ ಸಾಮರ್ಥ್ಯ
Last Updated 1 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್: ಕೀಟದ ಗಾತ್ರದ ಹೊಸ ರೋಬೊವೊಂದನ್ನು ವಿಜ್ಞಾನಿಗಳು ಅಭಿವೃದ್ಧಿ‍ಪಡಿಸಿದ್ದು, ಇದು ಸಣ್ಣ ಜಿರಳೆಯಷ್ಟೇ ವೇಗವಾಗಿ ನೆಲದ ಮೇಲೆ ಸಂಚರಿಸಬಲ್ಲದು.

‘ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಈ ರೋಬೊ ಬಳಕೆ ಸಾಕಷ್ಟು ಅನುಕೂಲಕಾರಿಯಾಗಿರುತ್ತದೆ. ಮನುಷ್ಯರು ಹಾಗೂ ಶ್ವಾನಗಳು ಪ್ರವೇಶಿಸಲು ಸಾಧ್ಯವಾಗದಂತಹ ಇಕ್ಕಟ್ಟಾದ ಸ್ಥಳಗಳಲ್ಲಿ ಅಥವಾ ಅಪಾಯಕಾರಿ ಪ್ರದೇಶಗಳಲ್ಲಿ ಇದನ್ನು ಬಳಸಲು ಸಾಧ್ಯ’ ಎಂದು ಅಮೆರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಿವೈ ಲಿನ್ ಹೇಳಿದ್ದಾರೆ.

‘ಸೈನ್ಸ್ ರೊಬೊಟಿಕ್ಸ್’ ನಿಯತಕಾಲಿಕೆಯಲ್ಲಿ ಈ ಕುರಿತ ಲೇಖನ ಪ್ರಕಟವಾಗಿದೆ.

‘ಸಾಮಾನ್ಯವಾಗಿ ಈ ರೀತಿ ಸಣ್ಣ ಗಾತ್ರದ ಇತರೆ ರೋಬೊಗಳು ಸಾಕಷ್ಟು ಸೂಕ್ಷ್ಮವಾಗಿರುತ್ತವೆ. ಅವುಗಳ ಮೇಲೆ ಕಾಲಿರಿಸಿದರೆ ಬಹುತೇಕ ಅವು ಹಾಳಾದಂತೆಯೇ. ಆದರೆ ನಾವು ಅಭಿವೃದ್ಧಿಪಡಿಸಿರುವ ರೋಬೊ ಸದೃಢವಾಗಿದ್ದು, ಹೆಚ್ಚು ತೂಕ ಹಾಕಿದರೂ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ನೋಡಲು ಸರಳವಾಗಿ ಕಾಣಿಸಿದರೂ ಹಲವು ಗಮನಾರ್ಹ ಕಾರ್ಯಕ್ಷಮತೆಯನ್ನು ಇದು ಹೊಂದಿದೆ’ ಎಂದು ಲಿನ್ ತಿಳಿಸಿದ್ದಾರೆ.

‘ಪ್ರಸ್ತುತ ಈ ರೋಬೊ ಅನ್ನು ತೆಳುವಾದ ವೈರ್‌ಗೆ ಸುತ್ತಲಾಗಿದ್ದು, ಇದು ರೋಬೊ ಚಾಲನೆಗೆ ಎಲೆಕ್ಟ್ರಿಕ್ ವೋಲ್ಟೆಜ್ ಒದಗಿಸುತ್ತದೆ. ವೈರ್‌ ಬದಲಿಗೆ ಬ್ಯಾಟರಿ ಅಳವಡಿಸಲು ಪ್ರಯೋಗ ನಡೆಸಲಾಗುತ್ತಿದೆ. ಆಗ ರೋಬೊ ಸ್ವತಂತ್ರವಾಗಿ ಚಲಿಸಬಲ್ಲದು. ಅಲ್ಲದೆ ಅಡೆತಡೆಗಳನ್ನು ಎದುರಿಸಿ ಮುಂದೆ ಸಂಚರಿಸುವ ರೀತಿ ಇದರ ವಿನ್ಯಾಸವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಂಡ ಹೇಳಿದೆ.

ಅವಶೇಷಗಳ ಅಡಿ ಬಳಕೆ ಸುಲಭ: ‘ಒಂದು ವೇಳೆ ಭೂಕಂಪ ಉಂಟಾದರೆ ದೊಡ್ಡ ಯಂತ್ರಗಳು ಹಾಗೂ ಶ್ವಾನಗಳನ್ನು ಬಳಸಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹುಡುಕುವುದು ಕಷ್ಟ. ಅಂತಹ ವೇಳೆ ಭಾರಿ ಅವಶೇಷಗಳ ನಡುವೆ ಸುಲಭವಾಗಿ ಪ್ರವೇಶಿಸಬಲ್ಲ ಗಟ್ಟಿಮುಟ್ಟಾದ ಇಂತಹ ರೋಬೊ ಅವಶ್ಯಕವಾಗುತ್ತದೆ’ ಎಂದು ಚೀನಾದ ಎಲೆಕ್ಟ್ರಾನಿಕ್ ಸೈನ್ಸ್ ಹಾಗೂ ಟೆಕ್ನಾಲಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಯಿಚುವಾನ್‌ವು ಅಭಿಪ್ರಾಯಪಟ್ಟಿದ್ದಾರೆ.

ವೈಶಿಷ್ಟ್ಯ
*ರೋಬೊ ತೂಕ 1/10 ಗ್ರಾಮ್‌ ಗಿಂತಲೂ ಕಡಿಮೆ
*60 ಕೆ.ಜಿ ತೂಕ ಹೊರಬಲ್ಲ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT