ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌: ದಾಳಿಯಲ್ಲಿ ಏಳು ಭಾರತೀಯರ ಸಾವು

ಸಾವಿಗೀಡಾದವರ ಸಂಖ್ಯೆ 50ಕ್ಕೆ ಏರಿಕೆ; ಕುಟುಂಬ ಸದಸ್ಯರ ರೋದನ
Last Updated 17 ಮಾರ್ಚ್ 2019, 20:16 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌/ಅಹಮದಾಬಾದ್‌: ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಎರಡು ಮಸೀದಿಗಳ ಮೇಲೆ ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಏಳು ಭಾರತೀಯರು ಸಾವಿಗೀಡಾಗಿರುವುದು ದೃಢಪಟ್ಟಿದೆ.

ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ನಡೆಸಿದ ದಾಳಿಯಲ್ಲಿ 50 ಮಂದಿ ಮೃತಪಟ್ಟಿದ್ದರು. ವಲಸೆಗಾರರನ್ನು ಗುರಿಯಾಗಿರಿಸಿಕೊಂಡು ಆಸ್ಟ್ರೇಲಿಯಾದ ಬ್ರೆಂಟನ್‌ ಟಾರ್ರಂಟ್‌ (28) ದಾಳಿ ನಡೆಸಿದ್ದ. ದಾಳಿಯಲ್ಲಿ ಗಾಯಗೊಂಡಿರುವ 50 ಮಂದಿ ಪೈಕಿ 12 ಮಂದಿ ಪರಿಸ್ಥಿತಿ ಗಂಭೀರವಾಗಿದೆ.

ಮೆಹಬೂಬ್‌ ಭಾಯಿ ಖೋಖರ್‌, ರಮೀಜ್‌ ವೊರಾ, ಅರೀಫ್‌ ವೊರಾ, ಅನ್ಸಿಯಾ ಅಲಿಬಾವಾ, ಹಫೀಜ್‌ ಮೂಸಾ ಪಟೇಲ್‌, ಜುನೇದ್‌ ಕಾರಾ ಮತ್ತು ಒಝೈರ್‌ ಖಾದಿರ್‌ ಸಾವಿಗೀಡಾದ ಭಾರತೀಯರು.

ಸಾವಿಗೀಡಾದ ಕುಟುಂಬದ ಸದಸ್ಯರಿಗೆ ವೀಸಾ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ವೆಬ್ ಪುಟ ಆರಂಭಿಸಲಾಗಿದೆ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ಸಹಾಯಕ್ಕಾಗಿ ತಂಡವೊಂದನ್ನು ನಿಯೋಜಿಸಲಾಗಿದೆ. ದಾಳಿಯಲ್ಲಿ ಗಾಯಗೊಂಡವರಿಗೆ ರಕ್ತದ ಅಗತ್ಯವಿದೆ. ‘ಎ+’ ಮತ್ತು ‘ಒ+’ ರಕ್ತದ ಗುಂಪು ಹೊಂದಿರುವವರು ರಕ್ತ ನಿಧಿ ಸಂಪರ್ಕಿಸಬೇಕು ಎಂದು ನ್ಯೂಜಿಲೆಂಡ್‌ನಲ್ಲಿರುವ ಹೈಕಮಿಷನ್‌ ಕಚೇರಿ ಕೋರಿದೆ.

ದಾಳಿಯಲ್ಲಿ ಸಾವಿಗೀಡಾದ 50ನೇ ವ್ಯಕ್ತಿಯ ದೇಹ ಅಲ್‌ ನೂರ್‌ ಮಸೀದಿಯಲ್ಲಿ ಪತ್ತೆಯಾಗಿದೆ. ಶನಿವಾರ ಮೃತದೇಹಗಳನ್ನು ಹೊರತೆಗೆಯುವಾಗ ಮತ್ತೊಂದು ಶವ ಪತ್ತೆಯಾಗಿದೆ. ಇದುವರೆಗೆ ದಾಳಿಯಲ್ಲಿ 49 ಮಂದಿ ಸಾವಿಗೀಡಾಗಿದ್ದರು ಎಂದು ತಿಳಿಸಲಾಗಿತ್ತು.

ಗುಜರಾತಿ ಕುಟುಂಬಗಳಲ್ಲಿ ಮೌನ

ದಾಳಿಯಲ್ಲಿ ಮೃತಪಟ್ಟ ಗುಜರಾತ್‌ನ ನಾಲ್ವರ ಕುಟುಂಬಗಳಲ್ಲಿ ಈಗ ನೀರವ ಮೌನ.

ವಡೋದರಾದ ಅರೀಫ್‌ ವೊರಾ (58) ಮತ್ತು ರಮೀಜ್‌ ವೊರಾ (28) ಸಾವಿಗೀಡಾದವರು. ಈ ಇಬ್ಬರು ತಂದೆ ಮತ್ತು ಮಗ. ರಮೀಜ್‌ ದಂಪತಿಗೆ ಇತ್ತೀಚೆಗೆ ಗಂಡು ಮಗು ಜನಿಸಿದ್ದರಿಂದ ಅರೀಫ್‌ ಅವರು ತಮ್ಮ ಪತ್ನಿ ಜತೆ ಫೆಬ್ರುವರಿ 14ರಂದು ಮೊಮ್ಮಗನನ್ನು ಕಾಣುವ ಖುಷಿಯಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ಆದರೆ, ಈ ಸಂತಸ ಬಹುದಿನಗಳ ಕಾಲ ಉಳಿಯಲಿಲ್ಲ. ರಮೀಜ್‌ ಅವರು ತಮ್ಮ ತಂದೆ–ತಾಯಿಯನ್ನು ಪ್ರಾರ್ಥನೆ ಸಲ್ಲಿಸಲು ಮಸೀದಿಗೆ ಕರೆದೊಯ್ದಿದ್ದರು.

ಇದೇ ರೀತಿ, ಭರೂಚ್‌ ಜಿಲ್ಲೆಯ ಲುವಾರಾ ಗ್ರಾಮದ ಹಫೀಜ್‌ ಮುಸಾ ಪಟೇಲ್‌ (56) ಕುಟುಂಬ ಸಹ ದುಃಖದಲ್ಲಿ ಮುಳುಗಿದೆ. ಮೂರು ದಶಕಗಳಿಂದ ಫಿಜಿಯಲ್ಲಿ ನೆಲೆಸಿದ್ದ ಪಟೇಲ್‌ ಅವರು, ಮೂರು ವಾರಗಳ ಹಿಂದೆಯಷ್ಟೇ ನ್ಯೂಜಿಲೆಂಡ್‌ಗೆ ತೆರಳಿದ್ದರು. ಅವರ ಇಬ್ಬರು ಪುತ್ರಿಯರು ಮತ್ತು ಮೂವರು ಪುತ್ರರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ವಾಸಿಸುತ್ತಿದ್ದ ಕಾರಣ ಈ ನಿರ್ಧಾರ ಕೈಗೊಂಡಿದ್ದರು. ಪತ್ನಿ ಜತೆಗೆ ಶುಕ್ರವಾರ ಮಸೀದಿಗೆ ತೆರಳಿದ್ದಾಗ ಪಟೇಲ್‌ ಅವರ ಬೆನ್ನಿಗೆ ಗುಂಡು ತಗುಲಿದೆ. ಬಳಿಕ ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದಾರೆ.

ನವಸಾರಿ ಜಿಲ್ಲೆಯ ಅಡದಾ ಗ್ರಾಮದ ಜುನೇದ್‌ ಕಾರಾ ಸಹ ಸಾವಿಗೀಡಾದವರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಿರೀಶ್‌ ಪಾಂಡ್ಯಾ ತಿಳಿಸಿದ್ದಾರೆ.

ದಾಳಿಯಲ್ಲಿ ಸಾವಿಗೀಡಾದ ಕೇರಳದ ತ್ರಿಶೂರ್‌ ಜಿಲ್ಲೆಯ ಕೊಡುಂನಲ್ಲೂರಿನ ಮಹಿಳೆ ಅನ್ಸಿಯಾ ಅಲಿಬಾವಾ (27) ಅವರ ಪಾರ್ಥಿವ ಶರೀರವನ್ನು ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ನ್ಯೂಜಿಲೆಂಡ್‌ನಲ್ಲೇ ಅಂತ್ಯಕ್ರಿಯೆ ನಡೆಸಲು ಅವಕಾಶ ನೀಡಬೇಕು ಎಂದು ಅಲ್ಲಿನ ಸರ್ಕಾರದ ಕೋರಿಕೆಯನ್ನು ಅನ್ಸಿಯಾ ಕುಟುಂಬದ ಸದಸ್ಯರು ತಿರಸ್ಕರಿಸಿದ್ದಾರೆ.

ಪ್ರತಿದಾಳಿ ನಡೆಸಿದ ಅಫ್ಗನ್‌ ನಿರಾಶ್ರಿತ

ಬಂದೂಕುಧಾರಿ ಉಗ್ರ ದಾಳಿ ನಡೆಸುತ್ತಿದ್ದಾಗ ಅಫ್ಗಾನಿಸ್ತಾನದ ನಿರಾಶ್ರಿತ ಅಬ್ದುಲ್‌ ಅಜೀಜ್‌ ಕ್ರೆಡಿಟ್‌ ಕಾರ್ಡ್‌ ಯಂತ್ರದಿಂದ ಪ್ರತಿ ದಾಳಿ ನಡೆಸಿ ಹಲವರನ್ನು ರಕ್ಷಿಸಿದ್ದಾರೆ.ಅಜೀಜ್‌ ಅವರ ಸಾಹಸ ಮೆಚ್ಚುಗೆಗೆ ಪಾತ್ರವಾಗಿದೆ. ‘ಯೋಚನೆ ಮಾಡಲು ಸಮಯವೇ ಇರಲಿಲ್ಲ. ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಪ್ರತಿ ದಾಳಿ ನಡೆಸಿದೆ’ ಎಂದಿದ್ದಾರೆ.

ದಾಳಿಕೋರನ ಜತೆ ಸೆಣಸಾಡಿದ ಪ್ರೊಫೆಸರ್‌ಗೆ ಪಾಕ್‌ ಪ್ರಶಸ್ತಿ

ಇಸ್ಲಾಮಾಬಾದ್‌: ಧೈರ್ಯದಿಂದ ದಾಳಿಕೋರನ ಮೇಲೆ ಮುಗಿಬಿದ್ದು ಹಲವರನ್ನು ರಕ್ಷಿಸಲು ಯತ್ನಿಸಿದ ಪಾಕಿಸ್ತಾನದ ವ್ಯಕ್ತಿಗೆ ಮರಣೋತ್ತರವಾಗಿ ರಾಷ್ಟ್ರೀಯ ಪ್ರಶಸ್ತಿ ನೀಡುವುದಾಗಿ ಪ್ರಧಾನಿ ಇಮ್ರಾನ್‌ ಖಾನ್‌ ಘೋಷಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಪ್ರೊಫೆಸರ್‌ ಆಗಿದ್ದ ಅಬೋಟಾಬಾದ್‌ನ ನಯೀಮ್‌ ರಶೀದ್‌, ಉಗ್ರನ ಜತೆ ಸೆಣಸಾಡುವಾಗ ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ರಶೀದ್‌ ಶನಿವಾರ ಮೃತಪಟ್ಟಿದ್ದರು. ರಶೀದ್‌ ಅವರ 22 ವರ್ಷದ ಮಗ ಸಹ ದಾಳಿಯಲ್ಲಿ ಸಾವಿಗೀಡಾಗಿದ್ದರು.

ದಾಳಿಯಲ್ಲಿ ಪಾಕಿಸ್ತಾನದ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ.

‘ಮೊಮ್ಮಗನ ಕೃತ್ಯ ಆಘಾತ ತಂದಿದೆ’

ಸಿಡ್ನಿ (ಎಎಫ್‌ಪಿ): ‘ನಮಗೆ ಆಘಾತವಾಗಿದೆ. ನಮ್ಮ ಕುಟುಂಬದ ಸದಸ್ಯನೊಬ್ಬ ಇಂತಹ ಹೇಯ ಕೃತ್ಯವೆಸಗುತ್ತಾನೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ...’

–ಇದು ಕ್ರೈಸ್ಟ್‌ಚರ್ಚ್‌ನಲ್ಲಿ ಮಸೀದಿ ಮೇಲೆ ದಾಳಿ ನಡೆಸಿದ ಬ್ರೆಂಟನ್‌ ಟಾರ್ರಂಟ್‌ ಅಜ್ಜಿ ಮಾರಿಯಾ ಫಿಟ್‌ಜೆರಾಲ್ಡ್‌ ಅವರ ನೋವಿನ ನುಡಿಗಳು.

‘ಗ್ರಾಫ್ಟನ್‌ ಎನ್ನುವ ಸಣ್ಣ ನಗರದಲ್ಲಿದ್ದ ಟಾರ್ರಂಟ್‌. ಯುರೋಪ್‌ನಲ್ಲಿ ಪ್ರವಾಸ ಮಾಡುತ್ತಿದ್ದಾಗ ಆತ ರಾಷ್ಟ್ರೀಯತೆಯ ಸಿದ್ಧಾಂತದ ಬಗ್ಗೆ ಒಲವು ತೋರಿದ್ದಾನೆ. ವಿದೇಶದಲ್ಲಿದ್ದಾಗಲೇ ನಮ್ಮ ಹುಡುಗ ಸಂಪೂರ್ಣ ಬದಲಾಗಿದ್ದಾನೆ. ತಂದೆ ಸಾವಿಗೀಡಾದ ಬಳಿಕ ಹಲವೆಡೆ ಪ್ರವಾಸ ಕೈಗೊಳ್ಳುತ್ತಿದ್ದ. ಇತ್ತೀಚಿನ ವರ್ಷಗಳಲ್ಲಿ ನ್ಯೂಜಿಲೆಂಡ್‌ ಡುನೆಡಿನ್‌ ನಗರದಲ್ಲಿದ್ದ’ ಎಂದು ಮಾರಿಯಾ ತಿಳಿಸಿದ್ದಾರೆ.

‘ಕಳೆದ ವರ್ಷ ಮನೆಗೆ ಬಂದಿದ್ದ. ಆದರೆ, ಆತನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ’ ಎಂದು ವಿವರಿಸಿದ್ದಾರೆ.

‘ಪತ್ನಿ ಕೊಂದವನನ್ನು ಕ್ಷಮಿಸಿದ್ದೇನೆ’

ಕ್ರೈಸ್ಟ್‌ಚರ್ಚ್‌: ‘ಆತನನ್ನೂ ಪ್ರೀತಿಸುತ್ತೇನೆ. ಕ್ಷಮಿಸುವುದೇ ಅತ್ಯುತ್ತಮ ಮಾರ್ಗ. ಆತನನ್ನು ದ್ವೇಷಿಸುವುದಿಲ್ಲ’.

ದಾಳಿಯಲ್ಲಿ 44 ವರ್ಷದ ಪತ್ನಿಯನ್ನು ಕಳೆದುಕೊಂಡ ಫರೀದ್‌ ಅಹ್ಮದ್‌ನ ಮಾತುಗಳಿವು.

‘ನನ್ನ ಪತ್ನಿ ಹಸ್ನಾ ಅಹ್ಮದ್‌ ಹಲವು ಮಹಿಳೆಯರು ಮತ್ತು ಮಕ್ಕಳು ಪಾರಾಗಲು ನೆರವಾಗಿದ್ದರು. ಸುರಕ್ಷಿತ ಸ್ಥಳವಾಗಿದ್ದ ಉದ್ಯಾನಕ್ಕೆ ತೆರಳುವಂತೆ ಎಲ್ಲರಿಗೂ ಕೂಗಿ ಹೇಳಿದ್ದರು. ತನ್ನ ಬಗ್ಗೆಯೇ ಮರೆತು ಎಲ್ಲರ ರಕ್ಷಣೆಯಲ್ಲಿ ತೊಡಗಿದ್ದಳು. ಬಳಿಕ, ಗಾಲಿಕುರ್ಚಿಯಲ್ಲಿದ್ದ ನನ್ನ ಹುಡುಕಾಟ ನಡೆಸಿದಳು. ನನ್ನ ಬಳಿ ಬರುತ್ತಿದ್ದಾಗ ಗುಂಡಿನ ದಾಳಿಗೆ ಸಿಲುಕಿ ಸಾವಿಗೀಡಾದಳು’ ಎಂದು ತಮ್ಮ ಕಣ್ಣೆದುರಿಗೆ ನಡೆದ ದುರ್ಘಟನೆಯನ್ನು ಕಣ್ಣೀರಿಡುತ್ತಾ ಫರೀದ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT