ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಬೇಹುಗಾರಿಕೆ ಉಪಗ್ರಹ ಉಡಾವಣೆ ವಿಫಲ: ಸಮುದ್ರಕ್ಕೆ ಬಿದ್ದ ರಾಕೆಟ್

Published 31 ಮೇ 2023, 2:47 IST
Last Updated 31 ಮೇ 2023, 2:47 IST
ಅಕ್ಷರ ಗಾತ್ರ

ಸೋಲ್‌ (ದಕ್ಷಿಣ ಕೊರಿಯಾ): ಉತ್ತರಕೊರಿಯಾ ಸೇನೆಗೆ ಬಲತುಂಬುವ ಉದ್ದೇಶದ, ದೇಶದ ಮೊದಲ ಬೇಹುಗಾರಿಕಾ ಉಪಗ್ರಹ ಉಡಾವಣೆ ವಿಫಲವಾಗಿದೆ. ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಗೆ ಕೊಂಡೊಯ್ಯುವಲ್ಲಿ ರಾಕೆಟ್‌ ವಿಫಲವಾಗಿ ಸಮುದ್ರಕ್ಕೆ ಬಿದ್ದಿದೆ.  

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜತೆಗೆ ಸೇನಾ ಸಂಘರ್ಷಕ್ಕಿಳಿದು, ಉದ್ವಿಗ್ನ ಪರಿಸ್ಥಿತಿ ನೆಲೆಸಿರುವಾಗ, ಸೇನಾ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಹೊರಟಿದ್ದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರಿಗೆ ಇದರಿಂದ ತೀವ್ರ ಹಿನ್ನಡೆಯಾದಂತಾಗಿದೆ.

ರಾಕೆಟ್‌ನ ಅವಶೇಷಗಳನ್ನು ಇಯೊಚಿಯಾಂಗ್ಡೊ ನೈರುತ್ಯ ದ್ವೀಪದ ಪಶ್ಚಿಮಕ್ಕೆ 200 ಕೀ.ಮೀ ದೂರದಲ್ಲಿ ಸಮುದ್ರದಿಂದ ವಶಪಡಿಸಿಕೊಂಡಿರುವುದಾಗಿ ದಕ್ಷಿಣ ಕೊರಿಯಾ ಸೇನೆ ಹೇಳಿದೆ. ರಕ್ಷಣಾ ಸಚಿವಾಲಯವು, ರಾಕೆಟ್‌ನ ಭಾಗವೆಂದು ಶಂಕಿಸಲಾದ ಬಿಳಿ ಬಣ್ಣದ ಲೋಹದ ಸಿಲಿಂಡರ್ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮಲಿಗ್‌ಯಾಂಗ್‌–1 ಬೇಹುಗಾರಿಕೆ ಉಪಗ್ರಹವನ್ನು ಹೊತ್ತ, ಹೊಸದಾಗಿ ಅಭಿವೃದ್ಧಿಪಡಿಸಲಾದ ಚೊಲಿಮಾ– 1 ರಾಕೆಟ್‌ ಅನ್ನು ದೇಶದ ಉತ್ತರ ಭಾಗದ ಸೋಹಾ ಉಪಗ್ರಹ ಉಡಾವಣಾ ನೆಲೆಯಿಂದ ಬೆಳಿಗ್ಗೆ 6.37ಕ್ಕೆ ಉಡಾವಣೆ ಮಾಡಲಾಗಿತ್ತು. ರಾಕೆಟ್‌ ಪ್ರತ್ಯೇಕಗೊಳ್ಳುವ ಮೊದಲ ಮತ್ತು ಎರಡನೇ ಹಂತದ ನಂತರ ಭಗ್ನವಾಗಿ ಕೊರಿಯಾ ದ್ವೀಪದ ಪಶ್ಚಿಮ ಕರಾವಳಿಯಲ್ಲಿ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ಹೇಳಿದೆ.   

ಉಡಾವಣೆ ವೇಳೆ ಆಗಿರುವ ದೋಷ ಸರಿಪಡಿಸಿ ಮತ್ತೊಮ್ಮೆ ಉಪಗ್ರಹ ಉಡಾವಣೆ ಮಾಡುವುದಾಗಿ ಉತ್ತರ ಕೊರಿಯಾ ಪ್ರತಿಜ್ಞೆ ಮಾಡಿದೆ. ‘ದೇಶದ ಬಾಹ್ಯಾಕಾಶ ಸಂಸ್ಥೆಯು ಉಪಗ್ರಹ ಉಡಾವಣೆಯಲ್ಲಿ ಆಗಿರುವ ಗಂಭೀರ ದೋಷಗಳ ಬಗ್ಗೆ ತನಿಖೆ ನಡೆಸಲಿದ್ದು, ಶೀಘ್ರವೇ ಎರಡನೇ ಉಡಾವಣೆ ಮಾಡಲಿದೆ’ ಎಂದು ದೇಶದ ಮಾಧ್ಯಮಗಳು ವರದಿ ಮಾಡಿವೆ.

ಕಿಮ್ ಅವರು ತಮ್ಮ ಸೇನಾ ಶಸ್ತ್ರಾಗಾರ ವಿಸ್ತರಣೆಗೆ ಮತ್ತು ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮೇಲೆ ಮತ್ತಷ್ಟು ಒತ್ತಡ ಹೇರಲು ನಿರ್ಧರಿಸಿರುವುದನ್ನು ಇದು ಸೂಚಿಸುತ್ತದೆ.

ಗೊಂದಲಕ್ಕೀಡಾದ ಜನ:

ದಕ್ಷಿಣಕೊರಿಯಾ ಮತ್ತು ಜಪಾನ್‌ನಲ್ಲಿ ನೆರೆಯ ರಾಷ್ಟ್ರದ ಬೇಹುಗಾರಿಕಾ ಉಪಗ್ರಹ ರಾಕೆಟ್‌ ಉಡಾವಣೆಯ ವೇಳೆ ಸರ್ಕಾರಿ ಸಂಸ್ಥೆಗಳು ನಾಗರಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಎಚ್ಚರಿಕೆಯ ಸಂದೇಶಗಳನ್ನು ಬುಧವಾರ ಬಿತ್ತರಿಸಿದವು.

ಆದರೆ, ಒಂದೊಂದು ದ್ವೀಪದಲ್ಲಿ ಒಂದೊಂದು ಸಮಯಕ್ಕೆ ಮತ್ತು ವಿಳಂಬವಾಗಿ ಬಿತ್ತರಗೊಂಡ ಎಚ್ಚರಿಕೆಯ ಸಂದೇಶಗಳಿಂದ ನಾಗರಿಕರು ಗೊಂದಲ ಮತ್ತು ಭಯಭೀತಿಗೆ ಒಳಗಾದ ಪ್ರಸಂಗ ನಡೆದಿದೆ. ತಪ್ಪು ಮಾಹಿತಿಯ ಸಂದೇಶಗಳ ಬಗ್ಗೆ ನಾಗರಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.  

ರಾಕೆಟ್‌ ಉಡಾವಣೆಯಾದ ನಂತರ ಕೆಲವು ಕಡೆ 14 ನಿಮಿಷಗಳು, ಮತ್ತೆ ಕೆಲವು ಕಡೆಗಳಲ್ಲಿ 22 ನಿಮಿಷಗಳು ವಿಳಂಬವಾಗಿ ಎಚ್ಚರಿಕೆ ಸಂದೇಶಗಳನ್ನು ದಕ್ಷಿಣ ಕೊರಿಯಾ ಆಂತರಿಕ ಭದ್ರತಾ ಸಚಿವಾಲಯ ನಾಗರಿಕರ ಮೊಬೈಲ್‌ಗಳಿಗೆ ರವಾನಿಸಿದೆ. ಈ ಪ್ರಮಾದಕ್ಕೆ ಸ್ಥಳೀಯಾಡಳಿತ ಮುಖ್ಯಸ್ಥರು ಜನರ ಕ್ಷಮೆಯಾಚಿಸಿದ್ದಾರೆ.    

ಜಪಾನ್‌ನ ಒಕಿನಾವಾದಲ್ಲಿ ಬೆಳಿಗ್ಗೆ 6.30ಕ್ಕೆ ಕ್ಷಿಪಣಿಯು ಜಪಾನ್‌ನತ್ತ ಬರುತ್ತಿರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಆದರೆ, ಜಪಾನ್‌ನತ್ತ ರಾಕೆಟ್ ಬರುತ್ತಿಲ್ಲವೆಂದು ಸರ್ಕಾರ ಖಚಿತಪಡಿಸಿದ 30 ನಿಮಿಷಗಳ ನಂತರ ಈ ಎಚ್ಚರಿಕೆಯನ್ನು ಹಿಂತೆಗೆದುಕೊಳ್ಳಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT