ಗಾಜಾ: ನಿರಾಶ್ರಿತರಿಗೆ ಆಶ್ರಯ ನೀಡಿದ್ದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 100ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.
‘ಅಲ್-ತಬಾಯೀನ್ ಶಾಲೆಯಲ್ಲಿ ಮುಂಜಾನೆ ಪ್ರಾರ್ಥನೆ ನಡೆಯುತ್ತಿರುವ ವೇಳೆ ವೈಮಾನಿಕ ದಾಳಿ ನಡೆದಿದೆ. ಇದು ಸಾವು ನೋವುಗಳ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ದಾಳಿ ಕುರಿತಂತೆ ಪ್ರತಿಕ್ರಿಯಿಸಿರುವ ಇಸ್ರೇಲ್ ವಾಯುಪಡೆ(ಐಎಎಫ್), ಹಮಾಸ್ ಕಮಾಂಡ್ ಸೆಂಟರ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನೆಡಸಲಾಗಿತ್ತು ಎಂದಿದೆ.
‘ಅಲ್-ತಬಾಯೀನ್ ಶಾಲೆಯಲ್ಲಿ ಅಡಗಿಕೊಂಡಿರುವ ಹಮಾಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಐಎಎಫ್ ತಿಳಿಸಿದೆ.
‘ದಾಳಿಗೂ ಮುನ್ನ ನಾಗರಿಕರಿಗೆ ಅಪಾಯವಾಗುದನ್ನು ತಪ್ಪಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು’ ಎಂದು ಅದು ಹೇಳಿದೆ.