ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರುವ 17,816 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪಾಕಿಸ್ತಾನ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ರಾವಲ್ಪಿಂಡಿಯ ಜೈಲಿನಲ್ಲಿರುವ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೆಸರು ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲ. ಖಾನ್ ಮತ್ತು ಅವರ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಪಕ್ಷದ ಹಲವು ನಾಯಕರ ಉಮೇದುವಾರಿಕೆಯನ್ನು ಆಯೋಗ ತಿರಸ್ಕರಿಸಿದೆ.
ಪಿಟಿಐ ಪಕ್ಷವು ತನ್ನ ಚುನಾವಣಾ ಚಿಹ್ನೆಯಾದ ‘ಕ್ರಿಕೆಟ್ ಬ್ಯಾಟ್’ ಅನ್ನು ಕಳೆದುಕೊಂಡ ಬಳಿಕ, ಅದು ತನ್ನ ಅಭ್ಯರ್ಥಿಗಳನ್ನು ಸ್ವತಂತ್ರವಾಗಿ ಕಣಕ್ಕಿಳಿಸಿದ್ದು, ಪ್ರತಿ ಅಭ್ಯರ್ಥಿಗೂ ವಿಭಿನ್ನ ಚಿಹ್ನೆಗಳನ್ನು ನೀಡಿದೆ.
ಚುನಾವಣಾ ಆಯೋಗವು ರಾಷ್ಟ್ರೀಯ ಅಸೆಂಬ್ಲಿ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ಸ್ಪರ್ಧಿಸಿರುವ 17,816 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಈ ಪೈಕಿ 11,785 ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ, 6,031 ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಸ್ಪರ್ಧಿಸಿದ್ದಾರೆ.
ಪಾಕ್‌ನ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಮುಖ್ಯಸ್ಥ ನವಾಜ್ ಷರೀಫ್ ಅವರು ಮನ್ಸೆಹ್ರಾ ಮತ್ತು ಲಾಹೋರ್‌ನಿಂದ ಸ್ಪರ್ಧಿಸಿದ್ದಾರೆ.