ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಹೋರ್ ಹೈಕೋರ್ಟ್ ಆದೇಶ ರದ್ದು: ಪಾಕ್ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟ

Published 16 ಡಿಸೆಂಬರ್ 2023, 6:19 IST
Last Updated 16 ಡಿಸೆಂಬರ್ 2023, 6:19 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಲಾಹೋರ್‌ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದು ಪಡಿಸುತ್ತಿದ್ದಂತೆಯೇ, ಪಾಕಿಸ್ತಾನ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚುನಾವಣೆ ಮೇಲ್ವಿಚಾರಣೆ ಸಲುವಾಗಿ ಚುನಾವಣಾ ಆಯೋಗಕ್ಕೆ ಸರ್ಕಾರದ ವತಿಯಿಂದ ಅಧಿಕಾರಿಗಳ ನೇಮಕ ಮಾಡುವುದಕ್ಕೆ ತಡೆ ನೀಡುವ ತೀರ್ಪನ್ನು ಲಾಹೋರ್‌ ಹೈಕೋರ್ಟ್‌ ನೀಡಿತ್ತು. ಇದರಿಂದ ಚುನಾವಣಾ ಪ್ರಕ್ರಿಯೆ ವಿಳಂಬವಾಗಲಿದೆ ಎಂಬುದನ್ನು ಪರಿಗಣಿಸಿ, ಈ ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ.

ಸದ್ಯ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಕ್ಷ ಪಾಕಿಸ್ತಾನ ತೆಹರೀಕ್‌ ಇ–ಇನ್ಸಾಫ್‌ (ಪಿಟಿಐ) ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ತೀರ್ಪು ನೀಡಿತ್ತು. ಸೂಕ್ತ ಸಮಯದಲ್ಲಿ ಚುನಾವಣೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಇದೇ ಪಕ್ಷ ಈ ಹಿಂದೆ ಮನವಿ ಮಾಡಿತ್ತು.

ಹೊಸ ಸರ್ಕಾರದ ಆಯ್ಕೆಗೆ 2024ರ ಫೆಬ್ರುವರಿ 8ರಂದು ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಕಳೆದ ತಿಂಗಳು ತಿಳಿಸಿತ್ತು.

ವೇಳಾಪಟ್ಟಿ
ಚುನಾವಣಾ ಆಯೋಗ ಶುಕ್ರವಾರ ರಾತ್ರಿ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ, ಡಿಸೆಂಬರ್‌ 20ರಿಂದ 22ರ ವರೆಗೆ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಹೆಸರುಗಳನ್ನು ಡಿಸೆಂಬರ್ 23ರಂದು ಪ್ರಕಟಿಸಲಾಗುತ್ತಿದೆ. ಡಿಸೆಂಬರ್ 24ರಿಂದ 30ರ ವರೆಗೆ ನಾಮಪತ್ರ ಪರಿಶೀಲನೆ ನಡೆಯುತ್ತದೆ.

ಒಂದು ವೇಳೆ ನಾಮಪತ್ರ ತಿರಸ್ಕೃತಗೊಂಡರೆ ಅದರ ವಿರುದ್ಧ 2024ರ ಜನವರಿ 3ರೊಳಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ನ್ಯಾಯ ಮಂಡಳಿಯು ಈ ಕುರಿತು ಜನವರಿ 10ರೊಳಗೆ ತೀರ್ಮಾನ ಕೈಗೊಳ್ಳಲಿದೆ. ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಜನವರಿ 11ರಂದು ಪ್ರಕಟಿಸಲಾಗುತ್ತದೆ.

ನಾಮಪತ್ರ ವಾಪಸ್‌ ಪಡೆಯಲು ಜನವರಿ 12 ಕೊನೆಯ ದಿನವಾಗಿದೆ.

ರಾಜಕೀಯ ಪಕ್ಷಗಳಿಗೆ ಜನವರಿ 13ರಂದು ಚುನಾವಣಾ ಚಿಹ್ನೆ ನಿಗದಿಪಡಿಸಲಾಗುತ್ತದೆ. ಫೆಬ್ರುವರಿ 8ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT