ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಚುನಾವಣೆ: ಮತ ಎಣಿಕೆ ವಿಳಂಬ– ಸಂವಹನಕ್ಕೆ ಪರದಾಟ

ಚುನಾವಣೆ ನಡೆದ ಒಟ್ಟು 265 ಸ್ಥಾನಗಳಲ್ಲಿ ಇಂದು ಬೆಳಿಗ್ಗೆ ಕೇವಲ 15 ಕ್ಷೇತ್ರಗಳ ಫಲಿತಾಂಶ ಮಾತ್ರ ಹೊರಬಿದ್ದಿದೆ
Published 9 ಫೆಬ್ರುವರಿ 2024, 6:09 IST
Last Updated 9 ಫೆಬ್ರುವರಿ 2024, 6:09 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಗುರುವಾರ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆದಿದ್ದು, ಅಲ್ಲಲ್ಲಿ ಹಿಂಸಾಚಾರ, ಇಂಟರ್‌ನೆಟ್ ಸೇವೆ ಸ್ಥಗಿತ ನಡುವೆಯೇ ನಿನ್ನೆ ರಾತ್ರಿಯಿಂದಲೇ ಮತ ಎಣಿಕೆ ಆರಂಭವಾಗಿದೆ.

ಮತ ಎಣಿಕೆಯಲ್ಲಿ ಇತ್ತೀಚಿನ ಮಾಹಿತಿ ಪ್ರಕಾರ ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್), ಇಮ್ರಾನ್‌ ಖಾನ್‌ ಅವರ ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್– ಎ– ಇನ್ಸಾಫ್‌) ಹಾಗೂ ಆಸೀಫ್ ಅಲಿ ಜರ್ಧಾರಿ ಅವರ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ತಲಾ ಐದು ಸ್ಥಾನಗಳಲ್ಲಿ ಗೆದ್ದು ಸಮಬಲ ಸಾಧಿಸಿವೆ.

ಅದಾಗ್ಯೂ ಪಿಎಂಎಲ್-ಎನ್ ಹಾಗೂ ಪಿಟಿಐ ಮಧ್ಯೆ ಹಣಾಹಣಿ ಏರ್ಪಟ್ಟಿದ್ದು ಇದೇ ಪಕ್ಷದ ಅಭ್ಯರ್ಥಿಗಳು ಹೆಚ್ಚು ಮುನ್ನಡೆಯಲ್ಲಿದ್ದಾರೆ ಎಂದು ಅಲ್ ಜಜೀರಾ ವೆಬ್‌ಸೈಟ್ ವರದಿ ಮಾಡಿದೆ.

ಚುನಾವಣೆ ನಡೆದ ಒಟ್ಟು 265 ಸ್ಥಾನಗಳಲ್ಲಿ ಇಂದು ಬೆಳಿಗ್ಗೆ ಕೇವಲ 15 ಕ್ಷೇತ್ರಗಳ ಫಲಿತಾಂಶ ಮಾತ್ರ ಹೊರಬಿದ್ದಿದೆ. ಇದರಿಂದ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾಕಿಸ್ತಾನ ಚುನಾವಣಾ ಆಯೋಗದ (ಇಸಿಪಿ) ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯ 266 ಸ್ಥಾನಗಳ ಪೈಕಿ 265 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 5,121 ಅಭ್ಯರ್ಥಿಗಳು ಮತ್ತು ನಾಲ್ಕು ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ 12,695 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಒಟ್ಟು 336 ಸ್ಥಾನಗಳಿದ್ದು ಇದರಲ್ಲಿ 265 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತದೆ. 60 ಸ್ಥಾನಗಳು ಮಹಿಳೆಯರಿಗೆ ಹಾಗೂ 10 ಸ್ಥಾನಗಳು ಅಲ್ಪಸಂಖ್ಯಾತರಿಗೆ ಮೀಸಲು.

ಇನ್ನೊಂದೆಡೆ ಮತ ಎಣಿಕೆ ವಿಳಂಬದ ಬಗ್ಗೆ ಪಾಕ್ ಒಳಾಡಳಿತ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಇಂಟರ್‌ನೆಟ್ ಸೇವೆ ಸ್ಥಗಿತ ಆಗಿರುವುದರಿಂದ ಸಾಕಷ್ಟು ಸಂವಹನ ಕೊರತೆ ಕಾಡುತ್ತಿದೆ. ಹೀಗಾಗಿ ವಿಳಂಬವಾಗಿದೆ. ಇದೊಂದು ಅಸಮಾನ್ಯವಾದ ವಿಳಂಬ ಎಂದು ಕಳವಳ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT