ಇಸ್ಲಾಮಾಬಾದ್: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಯಾಸಿನ್ ಮಲಿಕ್ ಪತ್ನಿ ಮುಶಾಲ್ ಹುಸೈನ್ ಮಲಿಕ್ ಅವರನ್ನು ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರುಲ್ ಹಕ್ ಕಾಕರ್ ಅವರ ವಿಶೇಷ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
ಅಧ್ಯಕ್ಷ ಆರಿವ್ ಅಲ್ವಿ ಅವರು 19 ಮಂದಿ ಉಸ್ತುವಾರಿ ಸಚಿವರಿಗೆ ಪ್ರಮಾಣವಚನ ಬೋಧಿಸಿದ ಬಳಿಕ ಪ್ರಧಾನ ಮಂತ್ರಿಯವರ ಐವರು ವಿಶೇಷ ಸಲಹೆಗಾರರ ಪಟ್ಟಿಯನ್ನು ಗುರುವಾರ ರಾತ್ರಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಮುಶಾಲ್ ಹೆಸರನ್ನು ಸೇರಿಸಲಾಗಿದೆ.
ಮುಶಾಲ್, ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಸಲಹೆ ನೀಡಲಿದ್ದಾರೆ.
ಪಾಕ್ ಹಂಗಾಮಿ ಪ್ರಧಾನಿಯಾಗಿ ಅನ್ವರುಲ್ ಹಕ್ ಕಾಕರ್ ಪ್ರಮಾಣ ಸ್ವೀಕಾರ
ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಯರ ಕುರಿತು ಜಾವದ್ ಸೊಹ್ರಾಬ್ ಮಲಿಕ್, ಸಾಗರೋತ್ತರ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಫ್ತಿಖರ್ ರಾವ್, ಪ್ರವಾಸೋದ್ಯಮ ವಿಚಾರವಾಗಿ ವಾಸಿಹ್ ಶಾ ಹಾಗೂ ಫೆಡರಲ್ ಎಜುಕೇಶನ್–ವೃತ್ತಿಪರ ತರಬೇತಿಗೆ ಸಂಬಂಧಿಸಿದಂತೆ ಸೈದಾ ಆರಿಫಾ ಜೆಹ್ರಾ ಅವರು ವಿಶೇಷ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ಯಾಸಿನ್–ಮುಶಾಲ್ ವಿವಾಹ
ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್, 2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಕಲಾವಿದೆ ಮುಶಾಲ್ ಅವರನ್ನು ಭೇಟಿಯಾಗಿದ್ದ. ಇವರಿಬ್ಬರು 2009ರಲ್ಲಿ ರಾವಲ್ಪಿಂಡಿಯಲ್ಲಿ ಮದುವೆಯಾಗಿದ್ದರು. ಮದುವೆ ನಂತರವೂ ಮುಶಾಲ್ ತಮ್ಮ ಮಗಳೊಂದಿಗೆ ಇಸ್ಲಾಮಾಬಾದ್‌ನಲ್ಲೇ ನೆಲೆಸಿದ್ದಾರೆ.
1985ರಲ್ಲಿ ಜನಿಸಿದ ಮುಶಾಲ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಪದವಿ ಪಡೆದಿದ್ದಾರೆ.
ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಯಾಸಿನ್‌ಗೆ ಮೇ ತಿಂಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಸದ್ಯ ತಿಹಾರ್ ಜೈಲಿನಲ್ಲಿರುವ ಈತನಿಗೆ ಮರಣದಂಡನೆ ವಿಧಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿದೆ.
ಮರಣದಂಡನೆ ಕೋರಿ ಎನ್‌ಐಎ ಅರ್ಜಿ: ಯಾಸಿನ್‌ಗೆ ಹೈಕೋರ್ಟ್ ನೋಟಿಸ್