ಇಸ್ಲಾಮಾಬಾದ್ (ಪಿಟಿಐ): ಹೊಸ ಅಧ್ಯಕ್ಷರ ಆಯ್ಕೆಗಾಗಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ಸೆ.8ರಂದು ತಮ್ಮ ಅಧಿಕಾರವಧಿ ಪೂರ್ಣಗೊಳಿಸಿದ ನಂತರವೂ ಅಧ್ಯಕ್ಷರಾಗಿಯೇ ಮುಂದುವರಿಯುವ ಸಂಭವವಿದೆ.
ಸಂವಿಧಾನದ ಪ್ರಕಾರ, ಸಂಸತ್ತಿನ ಸದಸ್ಯರು, ಸೆನೆಟ್ ಸದಸ್ಯರು ಹಾಗೂ ವಿವಿಧ ಪ್ರಾಂತ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡಬೇಕು. ಸದ್ಯ, ಪಂಜಾಬ್ ಮತ್ತು ಖೈಬೆರ್ ಪಖ್ತುಂಕ್ವಾ ಪ್ರಾಂತ್ಯಗಳ ವಿಧಾನಸಭೆ ವಿಸರ್ಜನೆಯಾಗಿದ್ದರೆ, ಉಳಿದವು ಮುಂದಿನ ತಿಂಗಳು ವಿಸರ್ಜನೆಗೊಳ್ಳಲಿವೆ.
ದೇಶದ ಸಾರ್ವತ್ರಿಕ ಚುನಾವಣೆಗೆ ಪೂರ್ವದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಚುನಾಯಿತ ಸರ್ಕಾರಗಳಿಲ್ಲದ ಕಾರಣ ಅಲ್ವಿ ಅಧ್ಯಕ್ಷರಾಗಿಯೇ ಮುಂದುವರಿಯಬಹುದು ಎಂದು ಜಿಯೊ ನ್ಯೂಸ್ ವರದಿ ಮಾಡಿದೆ. 2018ರ ಸೆಪ್ಟೆಂಬರ್ 9ರಂದು ಅಧ್ಯಕ್ಷರಾಗಿ ಅಲ್ವಿ ಆಯ್ಕೆಯಾಗಿದ್ದು, ಐದು ವರ್ಷಗಳ ಅವಧಿ ಸೆ. 8ಕ್ಕೆ ಪೂರ್ಣಗೊಳ್ಳಲಿದೆ.
ಪಾಕ್ ಸಂವಿಧಾನದ ಪ್ರಕಾರ, ಅಧ್ಯಕ್ಷರ ಅಧಿಕಾರವಧಿ ಪೂರ್ಣಗೊಳ್ಳುವ 30 ದಿನ ಮೊದಲು ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕು. ಅವಧಿ ಮುಗಿದರೂ ಹೊಸ ಅಧ್ಯಕ್ಷರ ಆಯ್ಕೆವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.