ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಲಕ್ಷ ಅಫ್ಗಾನ್‌ ನಿರಾಶ್ರಿತರು ಸೇರಿ ವಲಸಿಗರ ಗಡಿಪಾರಿಗೆ ಪಾಕ್ ಸರ್ಕಾರ ನಿರ್ಧಾರ

Published 7 ಅಕ್ಟೋಬರ್ 2023, 10:56 IST
Last Updated 7 ಅಕ್ಟೋಬರ್ 2023, 10:56 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಫ್ಗಾನಿಸ್ತಾನದ 17 ಲಕ್ಷ ನಿರಾಶ್ರಿತರು ಸೇರಿದಂತೆ ದೇಶದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಅಕ್ಟೋಬರ್‌ 31ರ ಒಳಗಾಗಿ ಹೊರಹಾಕಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ವಾರದಿಂದ ಅಪಾರಸಂಖ್ಯೆಯ ಜನರು ಅಫ್ಗಾನಿಸ್ತಾನ ಗಡಿಯಿಂದ ದೇಶದ ಒಳನುಸುಳುತ್ತಿದ್ದಾರೆ. ಈ ಅಕ್ರಮ ವಲಸಿಗರ ಪತ್ತೆಗೆ ತನಿಖಾ ಸಂಸ್ಥೆಗಳು ನಿರಂತರ ಶೋಧ ನಡೆಸುತ್ತಿರುವ ನಡುವೆಯೇ ಪಾಕಿಸ್ತಾನ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

‘ಯುರೋಪ್‌ ಆಗಲಿ, ಏಷ್ಯಾ ಆಗಲಿ; ಯಾವುದೇ ದೇಶವು ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದಿಲ್ಲ. ಅಂತರರಾಷ್ಟ್ರೀಯ ನೀತಿಯ ಅನ್ವಯ ನಾವು ಈ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಹಂಗಾಮಿ ವಿದೇಶಾಂಗ ಸಚಿವ ಜಲೀಲ್‌ ಅಬ್ಬಾಸ್‌ ಜಿಲಾನಿ ಅವರು ಟಿಬೆಟ್‌ನಲ್ಲಿ ತಿಳಿಸಿದ್ದಾರೆ ಎಂದು ಹಾಂಗ್‌ಕಾಂಗ್‌ನ ‘ಫೋನಿಕ್ಸ್‌ ಟಿ.ವಿ’ ವರದಿ ಮಾಡಿದೆ.

‘ವಲಸೆ ವಿಷಯವಾಗಿ ಸುದೀರ್ಘ ಕಾಲದಿಂದ ಅಫ್ಗಾನಿಸ್ತಾನದೊಂದಿಗೆ ಚರ್ಚಿಸುತ್ತಿದ್ದೇವೆ. ಆದರೆ ಸಮಸ್ಯೆ ಉದ್ಭವಿಸಿದಾಗಲೆಲ್ಲಾ ಜನರು ಪಾಕಿಸ್ತಾನಕ್ಕೆ ವಲಸೆ ಬರುತ್ತಾರೆ. ಕಳೆದ 40 ವರ್ಷಗಳಿಂದ ಇದೇ ಪರಿಪಾಠ ನಡೆಯುತ್ತಿದೆ. ಹೀಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ’ ಎಂದು ಜಿಲಾನಿ ತಿಳಿಸಿದ್ದಾರೆ.

ಅ.31ರ ಒಳಗಾಗಿ ದೇಶ ತೊರೆಯಿರಿ, ಇಲ್ಲದಿದ್ದರೆ ನವೆಂಬರ್‌ 1ರಿಂದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾವುದು ಎಂಬ ಪಾಕಿಸ್ತಾನದ ಎಚ್ಚರಿಕೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ  ಟೀಕೆ ವ್ಯಕ್ತವಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್‌ (ಯುಎನ್‌ಎಚ್‌ಸಿಆರ್‌) ಮುಂತಾದವು ತೀರ್ಮಾನವನ್ನು ಪುನರ್‌ಪರಿಶೀಲಿಸುವಂತೆ ಮನವಿ ಮಾಡಿವೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪಂಜಾಬ್‌ ಪ್ರಾಂತ್ಯದ ಹಂಗಾಮಿ ಮುಖ್ಯಮಂತ್ರಿ ಮೊಹಸಿನ್‌ ನಕ್ವಿ, ‘ಪಂಜಾಬ್‌ನಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಸ್ವಯಂ ಪ್ರೇರಿತರಾಗಿ ಹೊರಡಬೇಕು. ಪ್ರಾಂತ್ಯದ ಅಧಿಕಾರಿಗಳು ವಿದೇಶಿಯರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT