ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel Hamas War | ಕೇಂದ್ರ ಗಾಜಾದ ಆಸ್ಪತ್ರೆ ತೊರೆದ ವೈದ್ಯರು, ರೋಗಿಗಳು

Published 8 ಜನವರಿ 2024, 15:26 IST
Last Updated 8 ಜನವರಿ 2024, 15:26 IST
ಅಕ್ಷರ ಗಾತ್ರ

ದೇರ್‌ ಅಲ್‌ ಬಲಾಹ್‌ (ಗಾಜಾಪಟ್ಟಿ): ಇಸ್ರೇಲ್‌ ಸೈನಿಕರು ಮತ್ತು ಹಮಾಸ್‌ ಬಂಡುಕೋರರ ಕದನವು ಕೇಂದ್ರ ಗಾಜಾದ ಪ್ರಮುಖ ಆಸ್ಪತ್ರೆ ಅಲ್‌ –ಅಖ್ಸಾ ಮಾರ್ಟಿಯರ್ಸ್‌ ಅನ್ನು ಸಮೀಪಿಸಿದೆ. ಇದರಿಂದ ವೈದ್ಯರು, ರೋಗಿಗಳು ಮತ್ತು ಸ್ಥಳಾಂತರಗೊಂಡ ನಾಗರಿಕರು ಆಸ್ಪತ್ರೆ ತೊರೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಸೋಮವಾರ ತಿಳಿಸಿದ್ದಾರೆ.

ದೇರ್ ಅಲ್-ಬಾಲಾಹ್‌ನಲ್ಲಿರುವ ಅಲ್-ಅಖ್ಸಾ ಮಾರ್ಟಿಯರ್ಸ್‌ ಆಸ್ಪತ್ರೆಯಿಂದ ಪರಿಹಾರ ಏಜೆನ್ಸಿಗಳು ಮತ್ತು ವೈದ್ಯರು  ನಿರ್ಗಮಿಸಿದ್ದು, ಆಸ್ಪತ್ರೆಯಲ್ಲಿ ಸೌಲಭ್ಯಗಳು ಕ್ಷೀಣಿಸಿವೆ. ಮೂರು ತಿಂಗಳ ಯುದ್ಧದಿಂದ ಛಿದ್ರಗೊಂಡ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದವರು ಆಸ್ಪತ್ರೆ ತೊರೆದು ಹೋಗಿದ್ದಾರೆ.

‘ಆಸ್ಪತ್ರೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಸೌಲಭ್ಯಗಳು ಅಸ್ತವ್ಯಸ್ತಗೊಂಡಿವೆ. ನೆರವು ಏಜೆನ್ಸಿಗಳು ಹೊರನಡೆದ ನಂತರ ಸಾವಿರಾರು ಜನರು ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ. ಎಲ್ಲಿಯೂ ಹೋಗಲಾಗದ ಸ್ಥಿತಿಯಲ್ಲಿರುವ ರೋಗಿಗಳನ್ನು ಒಂದೇ ಮಹಡಿಯಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅಲ್-ಅಖ್ಸಾ ಮಾರ್ಟಿಯರ್ಸ್‌ ಆಸ್ಪತ್ರೆಯ ಉದ್ಯೋಗಿ ಒಮರ್ ಅಲ್-ದರಾವಿ ಹೇಳಿದ್ದಾರೆ. 

ಭಾರಿ ವೈಮಾನಿಕ ದಾಳಿಯ ಜತೆಗೆ ಇಸ್ರೇಲಿ ಪಡೆಗಳು ಕೇಂದ್ರ ಗಾಜಾದಲ್ಲಿ ಮುನ್ನುಗ್ಗುತ್ತಿರುವಂತೆ ಪ್ರತಿ ದಿನ ಸಾವು– ನೋವಿನ ಪ್ರಮಾಣ ಏರುತ್ತಿದೆ. ಕಳೆದ 24 ಗಂಟೆಗಳಲ್ಲಿ 99 ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 73 ಶವಗಳು ಆಸ್ಪತ್ರೆಗೆ ಬಂದಿವೆ ಎಂದು ಗಾಜಾ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಇನ್ನೂ ಹಲವು ತಿಂಗಳು ಹೋರಾಟ: ಇಸ್ರೇಲ್‌

ಸದ್ಯ ಗಾಜಾದ ಕೇಂದ್ರ ಭಾಗ ಮತ್ತು ದಕ್ಷಿಣದ ಖಾನ್‌ ಯೂನಿಸ್‌ ನಗರದ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಹಮಾಸ್‌ ಬಂಡುಕೋರರ ನಾಶಕ್ಕೆ ಮತ್ತು ಹಮಾಸ್‌ ಒತ್ತೆಯಾಗಿರಿಸಿಕೊಂಡಿರುವ ಎಲ್ಲರ ಸುರಕ್ಷಿತ ವಾಪಸಾತಿಗಾಗಿ ಹೋರಾಟ ಇನ್ನೂ ಹಲವು ತಿಂಗಳ ಕಾಲ ಮುಂದುವರಿಯಲಿದೆ ಎಂದು ಇಸ್ರೇಲ್‌ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ, ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ಮತ್ತು ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳು ಹಮಾಸ್‌ ಬಂಡುಕೋರರೊಂದಿಗೆ ಮೈತ್ರಿ ಮಾಡಿಕೊಂಡು ಬೆಂಬಲ ನೀಡುತ್ತಿರುವುದು, ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಇನ್ನಷ್ಟು ವ್ಯಾಪಕವಾಗುವ ಅಪಾಯ ತಲೆದೋರಿದೆ.     

ಇಸ್ರೇಲ್‌ ಸೇನೆಯ ಆಕ್ರಮಣದಿಂದ ಈಗಾಗಲೇ 22 ಸಾವಿರ ಪ್ಯಾಲೆಸ್ಟೀನಿಯರು ಹತರಾಗಿದ್ದಾರೆ. ಗಾಜಾ ಪಟ್ಟಿಯ ವಿಶಾಲ ಪ್ರದೇಶಗಳು ಧ್ವಂಸಗೊಂಡಿವೆ. ಗಾಜಾದ ಸುಮಾರು 23 ಲಕ್ಷ ಜನಸಂಖ್ಯೆಯಲ್ಲಿ ಶೇ 85ರಷ್ಟು ಜನರು ಈಗಾಗಲೇ ಸ್ಥಳಾಂತರಗೊಂಡಿದ್ದು, ಇದರಲ್ಲಿ ಕಾಲು ಭಾಗದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT