ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SCO Summit: ಉಜ್ಬೇಕಿಸ್ತಾನಕ್ಕೆ ಬಂದಿಳಿದ ಭಾರತ ಪ್ರಧಾನಿ ಮೋದಿ

Last Updated 16 ಸೆಪ್ಟೆಂಬರ್ 2022, 2:21 IST
ಅಕ್ಷರ ಗಾತ್ರ

ಸಮರ್ಕಂಡ್: ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉಜ್ಬೇಕಿಸ್ತಾನದ ಐತಿಹಾಸಿಕ ಸಮರ್ಕಂಡ್ ನಗರಕ್ಕೆ ಬಂದಿಳಿದಿದ್ದಾರೆ.

ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಾದೇಶಿಕ ಭದ್ರತಾ ಸವಾಲುಗಳು, ವ್ಯಾಪಾರ ವೃದ್ಧಿ ಮತ್ತು ಇಂಧನ ಪೂರೈಕೆಗೆ ಉತ್ತೇಜನ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಎರಡು ವರ್ಷಗಳ ನಂತರ ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಭಾಗವಹಿಸಲಿದ್ದಾರೆ.

ಉಜ್ಬೇಕಿಸ್ತಾನಕ್ಕೆ ತಮ್ಮ ಭೇಟಿ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನಾನು ಸಮರ್ಕಂಡ್ ತಲುಪಿದ್ದೇನೆ ಎಂದುಹೇಳಿದ್ದಾರೆ.

ಸಮರ್ಕಂಡ್ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಉಜ್ಬೇಕಿಸ್ತಾನದ ಪ್ರಧಾನ ಮಂತ್ರಿ ಅಬ್ದುಲ್ಲಾ ಅರಿಪೋವ್, ಸಚಿವರು, ಸಮರ್ಕಂಡ್ ಗವರ್ನರ್ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

ಪ್ರಧಾನಿ ತಮ್ಮ ಭೇಟಿ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷ ಶಾವ್ಕತ್ ಮಿರ್ಜಿಯೋಯೆವ್ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಎಸ್‌ಸಿಒ ಶೃಂಗಸಭೆಯಲ್ಲಿ ಸಮಕಾಲೀನ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳು, ಎಸ್‌ಸಿಒ ವಿಸ್ತರಣೆ, ಬಹುಪಕ್ಷೀಯ ಸಹಕಾರ ವೃದ್ಧಿಸಿಕೊಳ್ಳಲು ಅಭಿಪ್ರಾಯ ಹಂಚಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಉಜ್ಬೇಕಿಸ್ತಾನದ ಅಧ್ಯಕ್ಷರೊಂದಿಗೆ ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಸಂಬಂಧಿಸಿದಂತೆ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರಕಟಣೆ ಲಭ್ಯವಾಗಿಲ್ಲ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಸಹ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

2001ರಲ್ಲಿ ಸ್ಥಾಪನೆಯಾದ ಶಾಂಘೈ ಸಹಕಾರ ಸಂಘಟನೆಯು ಎಂಟು ಪೂರ್ಣ ಸದಸ್ಯ ರಾಷ್ಟ್ರಗಳನ್ನು ಹೊಂದಿವೆ. 2017ರಲ್ಲಿ ಭಾರತ ಹಾಗೂ ಪಾಕಿಸ್ತಾನ ಪೂರ್ಣ ಸದಸ್ಯ ರಾಷ್ಟ್ರಗಳಾಗಿ ಸೇರ್ಪಡೆಗೊಂಡಿತ್ತು. ಚೀನಾ, ಕಜಕಿಸ್ತಾನ, ಕಿರ್ಗಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ಎಸ್‌ಸಿಒನ ಆರು ಸ್ಥಾಪಕ ರಾಷ್ಟ್ರಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT