ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಮಾಲ್ಡೀವ್ಸ್‌ಗೆ ಹಾರುತ್ತಿದ್ದ ಧನಿಕರು, ಸೆಲೆಬ್ರಿಟಿಗಳಿಗೆ ಬ್ರೇಕ್

Last Updated 12 ಮೇ 2021, 11:44 IST
ಅಕ್ಷರ ಗಾತ್ರ

ಮಾಲೆ: ಭಾರತದಲ್ಲಿ ಕೊರೊನಾ ಉಲ್ಬಣವಾದರೆ ಸಾಕು. ಕೆಲ ಧನಿಕರು ಮತ್ತು ಸೆಲೆಬ್ರಿಟಿಗಳು ಪ್ರವಾಸಿಗರ ನೆಚ್ಚಿನ ತಾಣ ಮಾಲ್ಡೀವ್ಸ್‌ಗೆ ತೆರಳಿ ಹಾಲಿ ಡೇ ಪ್ರವಾಸ ಮಾಡುತ್ತಿದ್ದರು. ಇನ್ನುಮುಂದೆ ಈ ರೀತಿಯ ಜಾಲಿ ಟ್ರಿಪ್‌ಗೆ ಅವಕಾಶವಿಲ್ಲ. ಏಕೆಂದರೆ, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯಾದಿಂದ ಬರುವ ಪ್ರವಾಸಿಗರಿಗೆ ನಿಷೇಧ ಹೇರಿ ಬುಧವಾರ ಮಾಲ್ಡೀವ್ಸ್ ಆದೇಶ ಹೊರಡಿಸಿದೆ.

ಕೋವಿಡ್ ಆರಂಭಿಕ ದಿನಗಳಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸ್ಥಗಿತಗೊಳಿಸಿದ್ದ ಮಾಲ್ಡೀವ್ಸ್ ರಾಷ್ಟ್ರವು, ಕಳೆದ ಜುಲೈನಲ್ಲಿ ತನ್ನ ಪ್ರವಾಸಿ ರೆಸಾರ್ಟ್‌ಗಳನ್ನು ಪುನಃ ತೆರೆದಿತ್ತು.

ಆದರೆ, ಮಾಲ್ಡೀವ್ಸ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,40,000ಕ್ಕೆ ಜಿಗಿದಿದ್ದು, ಮಂಗಳವಾರ ಏಕದಿನ ದಾಖಲೆಯ 1,500 ಹೊಸ ಪ್ರಕರಣಗಳು ದಾಖಲಾಗಿವೆ. ತಿಂಗಳ ಹಿಂದಷ್ಟೇ ನಿತ್ಯ 100ಕ್ಕೂ ಕಡಿಮೆ ಪ್ರಕರಣಗಳು ಕಂಡುಬರುತ್ತಿದ್ದ ದೇಶದಲ್ಲಿ ಈಗ ದಿಢೀರ್ ಏರಿಕೆಯಾಗಿದೆ.

ಮಾಲ್ಡೀವ್ಸ್‌ಗೆ ಅತಿದೊಡ್ಡ ನೆರೆಯ ದೇಶ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳು ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿವೆ.

ಹೀಗಾಗಿ, ‘ದಕ್ಷಿಣ ಏಷ್ಯಾದ ದೇಶಗಳಾದ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬರುವ ಪ್ರವಾಸಿಗರಿಗೆ ಪ್ರವಾಸಿ ವೀಸಾಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮಾಲ್ಡೀವ್ಸ್ ಸರ್ಕಾರ ನಿರ್ಧರಿಸಿದೆ’ಎಂದು ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

ಪಟ್ಟಿಮಾಡಿದ ದೇಶಗಳಲ್ಲಿ 24 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಕಳೆದಿರುವ ಪ್ರಯಾಣಿಕರಿಗೆ ಅಥವಾ ಹಿಂದಿನ 14 ದಿನಗಳಲ್ಲಿ ಅವರನ್ನು ಭೇಟಿ ಮಾಡಿದ ಪ್ರಯಾಣಿಕರಿಗೂ ಅನಿರ್ದಿಷ್ಟಾವಧಿ ಪ್ರಯಾಣ ನಿಷೇಧ ಅನ್ವಯಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಈ ವರ್ಷ ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದವರಲ್ಲಿ ಅತಿ ದೊಡ್ಡ ಸಂಖ್ಯೆ ಭಾರತೀಯರದ್ದೇ ಆಗಿದೆ.

ಇತ್ತೀಚಿಗೆ ಬಾಲಿವುಡ್ ತಾರೆಯರಾದ ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಂತಾದವರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದ ಫೊಟೊಗಳನ್ನು ಶೇರ್ ಮಾಡಿದ್ದರು.

ದಕ್ಷಿಣ ಏಷ್ಯಾ ದೇಶಗಳನ್ನು ಹೊರತುಪಡಿಸಿ ಇತರ ದೇಶಗಳ ಪ್ರಯಾಣಿಕರಿಗೆ ಮಾಲ್ಡೀವ್ಸ್‌ನ ರೆಸಾರ್ಟ್ ದ್ವೀಪಗಳಿಗೆ ಪ್ರಯಾಣಿಸಲು ಇನ್ನೂ ಅನುಮತಿ ಇದೆ, ಆಗಮನಕ್ಕೂ 96 ಗಂಟೆಗಳ ಹಿಂದೆ ಪಡೆದ ಕೊರೊನಾ ನೆಗೆಟಿವ್ ವರದಿ ಇರಬೇಕು. ಆದರೆ, ಸ್ಥಳೀಯ ಜನರ ಜೊತೆ ಬೆರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT