ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಗೆ ಸೀಹಾಕ್‌ ಹೆಲಿಕಾಪ್ಟರ್‌

ಭಾರತಕ್ಕೆ ನೀಡಲು ಅಮೆರಿಕದ ಒಪ್ಪಿಗೆ: ಜಲಾಂತರ್ಗಾಮಿಗಳ ವಿರುದ್ಧ ಕಾರ್ಯಾಚರಣೆಗೆ ಬಳಕೆ
Last Updated 3 ಏಪ್ರಿಲ್ 2019, 20:25 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಲಾಂತರ್ಗಾಮಿಗಳನ್ನು ಪತ್ತೆ ಮಾಡುವ ಮತ್ತು ರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುವ ’ಎಂಎಚ್‌–60 ರೋಮಿಯೊ’ ಸೀಹಾಕ್‌ ಹೆಲಿಕಾಪ್ಟರ್‌ಗಳು ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿವೆ.

ವಿವಿಧ ರೀತಿಯಲ್ಲಿ ಬಳಕೆಯಾಗುವ 24 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ. ಇದರಿಂದ, ಭಾರತೀಯ ನೌಕಾಪಡೆಗೆ ಅಪಾರ ಬಲ ಬಂದಂತಾಗಲಿದೆ.

ಜಲಾಂತರ್ಗಾಮಿಗಳನ್ನು ಬೇಟೆಯಾಡುವ ಮತ್ತು ಹಡಗುಗಳ ಮೇಲೆ ದಾಳಿ ನಡೆಸಲು ಹಾಗೂ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಈ ಹೆಲಿಕಾಪ್ಟರ್‌ಗಳನ್ನು ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

'ಲಾಕ್‌ಹೀಡ್‌ ಮಾರ್ಟಿನ್‌’ ನಿರ್ಮಿತ ಈ ಹೆಲಿಕಾಪ್ಟರ್‌ಗಳು ಈಗಿರುವ ಬ್ರಿಟಿಷ್‌ ನಿರ್ಮಿತ ‘ಸೀ ಕಿಂಗ್‌’ ಹೆಲಿಕಾಪ್ಟರ್‌ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿವೆ.

ಭಾರತದ ರಕ್ಷಣಾ ಪಡೆ ಬಲಪಡಿಸುವಲ್ಲಿ ಈ ಹೆಲಿಕಾಪ್ಟರ್‌ಗಳು ಮಹತ್ವದ ಪಾತ್ರವಹಿಸಲಿವೆ. ಈಗ ಜಾರಿಯಲ್ಲಿರುವ ವಿದೇಶಾಂಗ ನೀತಿ ಅನ್ವಯ ಈ ಮಾರಾಟ ಒಪ್ಪಂದ ಕೈಗೊಳ್ಳಲಾಗಿದೆ. ಇದರಿಂದ, ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಸಂಬಂಧ ಬಲಪಡಿಸಲು ನೆರವಾಗಲಿದೆ ಎಂದು ಟ್ರಂಪ್‌ ಆಡಳಿತ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಾದೇಶಿಕವಾಗಿ ಎದುರಾಗುವ ಬೆದರಿಕೆಗಳಿಗೆ ಮತ್ತು ಆಂತರಿಕ ರಕ್ಷಣಾ ಕಾರ್ಯಾಚರಣೆಗಳಿಗೆ ಈ ಹೆಲಿಕಾಪ್ಟರ್‌ಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲಿದೆ. ಜತೆಗೆ, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಸ್ಥಾಪಿಸಲು ಮತ್ತು ಆರ್ಥಿಕ ಪ್ರಗತಿಯಲ್ಲೂ ಪ್ರಮುಖ ಪಾತ್ರವಹಿಸಲಿದೆ ಎಂದು ತಿಳಿಸಿದೆ.

ಭಾರತಕ್ಕೆ ಏಕೆ ಅಗತ್ಯ?
ಭಾರತ ಈ ಹೆಲಿಕಾಪ್ಟರ್‌ಗಳನ್ನು ದಶಕದ ಹಿಂದೆಯೇ ಖರೀದಿಸಲು ಆಸಕ್ತಿವಹಿಸಿತ್ತು. ಪ್ರಸ್ತುತ ಸಂದರ್ಭದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆಯಿಂದಾಗಿ ಭಾರತಕ್ಕೆ ಇಂತಹ ಹೆಲಿಕಾಪ್ಟರ್‌ಗಳನ್ನು ಖರೀದಿಸುವುದು ಅಗತ್ಯವಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

24:ಒಟ್ಟು ಹೆಲಿಕಾಪ್ಟರ್‌ಗಳು
₹17,836ಕೋಟಿ(2.6 ಶತಕೋಟಿ ಡಾಲರ್‌):ಹೆಲಿಕಾಪ್ಟರ್‌ಗಳ ಮೌಲ್ಯ

ಹೆಲಿಕಾಪ್ಟರ್‌ ವಿಶೇಷತೆ
* ಕಡಲಭದ್ರತೆಗೆ ವಿಶ್ವದ ಅತ್ಯಾಧುನಿಕ ನೌಕಾಪಡೆ ಹೆಲಿಕಾಪ್ಟರ್‌
* ಹಡಗುಗಳು, ವಿಧ್ವಂಸಕ ನೌಕೆಗಳು ಮತ್ತು ಯುದ್ಧನೌಕೆಗಳಿಂದ ಕಾರ್ಯಾಚರಣೆ ಕೈಗೊಳ್ಳುವಂತೆ ವಿನ್ಯಾಸ
* ಪ್ರಸ್ತುತ ಅಮೆರಿಕ ನೌಕಾಪಡೆಯಲ್ಲಿ ಜಲಾಂತರ್ಗಾಮಿ ನಿಗ್ರಹಕ್ಕೆ ಬಳಕೆ
* ಜಲಾಂತರ್ಗಾಮಿಗಳ ಮೇಲೆ ಯುದ್ಧ, ಸರ್ವೇಕ್ಷಣೆ, ಸಂವಹನ, ಶೋಧ ಮತ್ತು ರಕ್ಷಣಾ ಕಾರ್ಯ, ಸರಕು ಸಾಗಾಟಕ್ಕೆ ಬಳಸಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT