ವಾಷಿಂಗ್ಟನ್: ಮಹಿಳೆಯರ ಕುರಿತು ಮಾನಹಾನಿಕರ ಹೇಳಿಕೆ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಅಮೆರಿಕದ ನಟಿ ಹಾಗೂ ಗಾಯಕಿ ಮೇರಿ ಮಿಲ್ಟೆನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬರಲಿರುವ ಚುನಾವಣೆಯಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಸದೃಢಗೊಳಿಸುವ ಮೂಲಕ ಇಂಥ ಕೀಳು ಹೇಳಿಕೆಗೆ ತಕ್ಕ ಉತ್ತರ ನೀಡಬೇಕು’ ಎಂದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಮೈಕ್ರೊ ಬ್ಲಾಗಿಂಗ್ ಎಕ್ಸ್‌ನ ತಮ್ಮ ಖಾತೆಯಲ್ಲಿ ವಿಡಿಯೊ ಸಂದೇಶ ಸಹಿತ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ‘ಭಾರತದ ಸೋದರ ಹಾಗೂ ಸೋದರಿಯರಿಗೆ ನಮಸ್ತೆ ಎಂದು ಹೇಳುವ ಮೂಲಕ ತಮ್ಮ ಮಾತು ಆರಂಭಿಸಿದ್ದಾರೆ. ಚುನಾವಣಾ ಋತು ಎಂದರೆ ಬದಲಾವಣೆಗೆ ಸಿಗುವ ಅವಕಾಶ ಹಾಗೂ ಯಾವುದೇ ಬದಲಾವಣೆ ತರದ ಹಾಗೂ ಪ್ರಯೋಜನವಿಲ್ಲದ ನೀತಿಗಳನ್ನು ಜಾರಿಗೆ ತಂದವರನ್ನು ಮರಳಿ ಮನೆಗೆ ಕಳುಹಿಸುವ ಸಮಯವೂ ಹೌದು. ಚುನಾವಣೆಯಲ್ಲಿ ಜನರ ಸ್ಪೂರ್ತಿಯಾದ, ಉತ್ತಮ ಮೌಲ್ಯಗಳುಳ್ಳ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡಬಲ್ಲವರನ್ನು ಆಯ್ಕೆ ಮಾಡಬೇಕು. ಆ ಮೂಲಕ ದೇಶದ ಭವಿಷ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಸಾಧ್ಯ’ ಎಂದಿದ್ದಾರೆ.
Brothers and sisters of India, Namaste 🙏🏾
— Mary Millben (@MaryMillben) November 8, 2023
The 2024 election season has commenced across the world, here in America and certainly in India. Election seasons present an opportunity for change, to put an end to outdated policies and non progressive people, replaced with voices and… pic.twitter.com/yaetjrhgqk
‘ನಾನೇಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೇನೆ ಮತ್ತು ಭಾರತದ ಬೆಳವಣಿಗೆ ಕುರಿತು ಸದಾ ಯೋಚಿಸುತ್ತೇನೆ ಎಂದು ಬಹಳಷ್ಟು ಜನ ಕೇಳುತ್ತಾರೆ. ಭಾರತ ಮತ್ತು ಜಾಗತಿಕ ಮಟ್ಟದಲ್ಲಿರುವ ಭಾರತೀಯರನ್ನು ನಾನು ಪ್ರೀತಿಸುತ್ತೇನೆ. ಭಾರತದ ನಾಗರಿಕರ ಬೆಳವಣಿಗೆಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುತ್ತಮ ನಾಯಕ ಎಂದು ನಾನು ನಂಬಿದ್ದೇನೆ. ಅದರಲ್ಲೂ ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ, ಜಾಗತಿಕ ಆರ್ಥಿಕ ಸ್ಥಿರತೆಗೆ ಇವರ ಕೊಡುಗೆ ಅಪಾರ. ಇಷ್ಟು ಮಾತ್ರವಲ್ಲ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು, ತಮ್ಮ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕೊಟ್ಟಿದ್ದು ಸೇರಿದಂತೆ ಮಹಿಳೆಯರ ಸಬಲೀಕರಣಕ್ಕೆ ಇವರ ಕೊಡುಗೆ ಅನನ್ಯ. ಭಾರತೀಯ ಮಹಿಳಾ ಕ್ರೀಡಾಪಟುಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಮತ್ತು ಅವರ ಸಾಧನೆ... ಹೀಗೆ ಎಲ್ಲವನ್ನೂ ಗಮನಿಸಿದಾಗ ಮೋದಿ ಅವರು ಮಹಿಳೆಯರಿಗೆ ನೀಡುತ್ತಿರುವ ಬೆಂಬಲ ಬೆಟ್ಟದಷ್ಟು’ ಎಂದು ಮನಸಾರೆ ಹೊಗಳಿದ್ದಾರೆ.
‘ಆದರೆ, ಬಿಹಾರದಲ್ಲಿ ಮಹಿಳೆಯರ ಮೌಲ್ಯಕ್ಕೇ ಸವಾಲು ಎದುರಾಗಿದೆ. ಇಂಥ ಸವಾಲಿಗೆ ಇರುವ ಏಕೈಕ ಉತ್ತರವೆಂದರೆ ಅದು ಮಹಿಳೆಯರು ಒಗ್ಗೂಡಿ ತಮ್ಮ ನಾಯಕಿಯೊಬ್ಬರನ್ನು ಆಯ್ಕೆ ಮಾಡುವ ಮೂಲಕ, ಬರಲಿರುವ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಬೇಕು. ಒಂದೊಮ್ಮೆ ನಾನೇನಾದರೂ ಭಾರತದ ಪ್ರಜೆಯಾಗಿದ್ದರೆ, ಬಿಹಾರಕ್ಕೆ ತೆರಳಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸುತ್ತಿದ್ದೆ’ ಎಂದಿದ್ದಾರೆ.
‘ನಿತೀಶ್ ಕುಮಾರ್ ಅವರು ಒಬ್ಬ ನಾರಿ ಬಿಹಾರದ ಮುಖ್ಯಮಂತ್ರಿಯಾಗುವ ಹಾದಿಯನ್ನು ರಾಜಿನಾಮೆ ನಿಡುವ ಮೂಲಕ ಸುಗಮಗೊಳಿಸಬೇಕು. ಬಿಹಾರದಲ್ಲಿ ಮಹಿಳೆಯೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಬೇಕು. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಹೇಳಿದಂತೆ ಮತದಾನದ ಮೂಲಕ ಬದಲಾವಣೆ ತರಬೇಕು ಎಂಬ ಮಾತನ್ನು ನಿಜವಾಗಿಸಬೇಕು’ ಎಂದು ಬಿಹಾರದ ಜನತೆಗೆ ಮೇರಿ ಮಿಲ್ಟೆನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.