ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡಾನ್‌| ಪ್ರತಿಕೂಲ ಸನ್ನಿವೇಶದಲ್ಲೂ 121 ಜನರನ್ನು ರಕ್ಷಿಸಿದ ಭಾರತೀಯ ವಾಯುಪಡೆ

ಸಣ್ಣ ವಾಯುನೆಲೆಯಲ್ಲಿ ನೈಟ್ ವಿಷನ್‌ ಗಾಗಲ್ಸ್ ಬಳಸಿ ಕಾರ್ಯಾಚರಣೆ
Published 29 ಏಪ್ರಿಲ್ 2023, 11:36 IST
Last Updated 29 ಏಪ್ರಿಲ್ 2023, 11:36 IST
ಅಕ್ಷರ ಗಾತ್ರ

ನವದೆಹಲಿ : ಸಂಘರ್ಷ ಪೀಡಿತ ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಿಂದ ಸುಮಾರು 40 ಕಿ.ಮೀ. ಉತ್ತರಕ್ಕೆ  ವಾಡಿ ಸಯ್ಯಿದ್ನಾ ಎಂಬಲ್ಲಿರುವ ಸಣ್ಣ ವಾಯುನೆಲೆಯ ಪ್ರತಿಕೂಲ ಸನ್ನಿವೇಶದಲ್ಲೂ ಭಾರತೀಯ ವಾಯುಪಡೆ 121 ಜನರನ್ನು ರಕ್ಷಣೆ ಮಾಡುವ ಮಹತ್ವದ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏಪ್ರಿಲ್ 27 ಮತ್ತು 28ರ ಮಧ್ಯರಾತ್ರಿಯಲ್ಲಿ ಸಿ–130ಜೆ ಸರಕು ಸಾಗಣೆ ವಿಮಾನದ ಮೂಲಕ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

‘ಸಣ್ಣದಾದ ವಾಯುನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವಾಗ ಭಾರತೀಯ ವಾಯುಪಡೆಯು ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ರಾತ್ರಿಯ ಕತ್ತಲಿನಲ್ಲಿ ವಿಮಾನವು ಲ್ಯಾಂಡಿಂಗ್ ಮಾಡಲು ಅಲ್ಲಿ ಯಾವುದೇ ರೀತಿಯ ಬೆಳಕು ಇರಲಿಲ್ಲ. ಜತೆಗೆ ಮಾರ್ಗದರ್ಶನವೂ ಇರಲಿಲ್ಲ. ಹಾಗಾಗಿ, ವಾಯುಪಡೆಯ ಸಿಬ್ಬಂದಿ ನೈಟ್ ವಿಷನ್ ಗಾಗಲ್ಸ್ (ಕತ್ತಲೆಯಲ್ಲಿ ಬಳಸುವ ವಿಶೇಷ ಕನ್ನಡಕ) ಬಳಸಿ ಲ್ಯಾಂಡಿಂಗ್ ಮತ್ತು ಟೇಕ್‌ ಆಫ್ ಮಾಡಬೇಕಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ರನ್‌ವೇ ಯಾವುದೇ ಅಡೆತಡೆಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಮಾನ ಸಿಬ್ಬಂದಿ ತಮ್ಮ ಎಲೆಕ್ಟ್ರೋ-ಆಪ್ಟಿಕಲ್ ಮತ್ತು ಇನ್‌ಫ್ರಾರೆಡ್ ಸಂವೇದಕಗಳನ್ನು ಬಳಸಿದರು ಮತ್ತು ಸಮೀಪದಲ್ಲಿ ಯಾವುದೇ ಶತ್ರುಗಳ ಉಪಸ್ಥಿತಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡರು. ಲ್ಯಾಂಡಿಂಗ್ ನಂತರ, ಐಎಎಫ್‌ನ 8 ಗರುಡ್ ಕಮಾಂಡೋಗಳು ಪ್ರಯಾಣಿಕರನ್ನು ಮತ್ತು ಅವರ ಲಗೇಜ್‌ಗಳನ್ನು ವಿಮಾನದೊಳಗೆ ಇರಿಸಿದರು. ಈ ವೇಳೆ ವಿಮಾನದ ಎಂಜಿನ್ ಅನ್ನು ಚಾಲನೆಯಲ್ಲೇ ಇರಿಸಿಕೊಳ್ಳಲಾಗಿತ್ತು. ಬಳಿಕ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನವನ್ನು ಯಶಸ್ವಿಯಾಗಿ ಟೇಕಾಫ್‌ ಮಾಡಲಾಯಿತು’ ಎಂದು ಅವರು ವಿವರಿಸಿದರು.

ಸುಡಾನ್‌ ಬಂದರಿಗೆ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ‘ಆಪರೇಷನ್ ಕಾವೇರಿ’ ಕೆಲವು ದಿನಗಳಿಂದ ಜಾರಿಯಲ್ಲಿದೆ. ಈಗಾಗಲೇ ನೂರಾರು ಮಂದಿಯನ್ನು ನೌಕಾಪಡೆ ಹಡಗುಗಳ ಮೂಲಕ ಮೊದಲು ಜಿದ್ದಾಕ್ಕೆ ಹಾಗೂ ಬಳಿಕ ಭಾರತಕ್ಕೆ ಕರೆತರಲಾಗಿದೆ. ಆದರೆ ಸುಡಾನ್‌ ಬಂದರಿಗೆ ತೆರಳಲು ಅಸಾಧ್ಯವಾದವರನ್ನು ರಕ್ಷಿಸುವ ಸಲುವಾಗಿ ಈ ವಿಶೇಷ ಕಾರ್ಯಾಚರಣೆ ನಡೆಯಿತು.  ರಕ್ಷಿಸಿದವರಲ್ಲಿ ಒಬ್ಬರು ಗರ್ಭಿಣಿ ಸಹ ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

2021ರ ಆಗಸ್ಟ್‌ನಲ್ಲಿ ಅ‌ಘ್ಗಾನಿಸ್ತಾನದಲ್ಲಿ ತಾಲಿಬಾನ್ ಅತಿಕ್ರಮಣದ ಬಳಿಕ ಭಾರತೀಯ ವಾಯುಪಡೆಯು ಕಾಬೂಲ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಇದೇ ರೀತಿಯ ಕಾರ್ಯಾಚರಣೆಗಳನ್ನು ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT