ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಉತ್ತಮ ಸಂಬಂಧ ಇಬ್ಬರಿಗೂ ಒಳಿತು: ಮೋದಿ ಮಾತಿಗೆ ಪ್ರತಿಕ್ರಿಯೆ

Published 11 ಏಪ್ರಿಲ್ 2024, 16:04 IST
Last Updated 11 ಏಪ್ರಿಲ್ 2024, 16:04 IST
ಅಕ್ಷರ ಗಾತ್ರ

ಬೀಜಿಂಗ್: ಭಾರತ ಹಾಗೂ ಚೀನಾ ನಡುವಿನ ಸಂಬಂಧವು ಉತ್ತಮವಾಗಿ, ಸ್ಥಿರವಾಗಿ ಇರುವುದು ಎರಡೂ ದೇಶಗಳ ಹಿತಾಸಕ್ತಿಗಳಿಗೆ ಪೂರಕ ಎಂದು ಚೀನಾ ಗುರುವಾರ ಹೇಳಿದೆ.

ಭಾರತದ ಪಾಲಿಗೆ ಚೀನಾ ಜೊತೆಗಿನ ಸಂಬಂಧವು ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಕ್ಕೆ ಪ್ರತಿಯಾಗಿ ಈ ಮಾತು ಬಂದಿದೆ.

ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ರಚನಾತ್ಮಕ ಮಾತುಕತೆ ಮೂಲಕ ಎರಡೂ ದೇಶಗಳಿಗೆ (ಭಾರತ ಮತ್ತು ಚೀನಾ) ಗಡಿಯಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ‍ಮೋದಿ ಅವರು ನ್ಯೂಸ್‌ವೀಕ್ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ಆಡಿರುವ ಮಾತುಗಳನ್ನು ಚೀನಾ ಗಮನಿಸಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ.

‘ಚೀನಾ ಮತ್ತು ಭಾರತದ ನಡುವಿನ ಸಂಬಂಧವು ಉತ್ತಮವಾಗಿದ್ದರೆ, ಸ್ಥಿರವಾಗಿದ್ದರೆ ಎರಡೂ ದೇಶಗಳ ಹಿತಾಸಕ್ತಿಗಳಿಗೆ ಒಳಿತು ಎಂಬುದು ನಮ್ಮ ನಂಬಿಕೆ. ಅದು ಈ ಪ್ರದೇಶದಲ್ಲಿ ಹಾಗೂ ಅದರ ಆಚೆಗೂ ಶಾಂತಿ ಮತ್ತು ಅಭಿವೃದ್ಧಿಗೆ ಪೂರಕ’ ಎಂದು ನಿಂಗ್ ಅವರು ಹೇಳಿದ್ದಾರೆ.

ಚೀನಾ ಜೊತೆಗಿನ ಸಂಬಂಧವು ಮಹತ್ವದ್ದು, ಮುಖ್ಯವಾದುದು ಎಂದು ಮೋದಿ ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ಅಮೆರಿಕದ ನಿಯತಕಾಲಿಕೆಯೊಂದಕ್ಕೆ ಈಚೆಗೆ ಸಂದರ್ಶನ ನೀಡಿರುವುದು ಇದೇ ಮೊದಲು.

‘ನಮ್ಮ ಗಡಿಗಳಲ್ಲಿ ಬಹುಕಾಲದಿಂದ ಉಂಟಾಗಿರುವ ಪರಿಸ್ಥಿತಿಯನ್ನು ‌ನಾವು ತ್ವರಿತವಾಗಿ ಬಗೆಹರಿಸಬೇಕು ಎಂಬುದು ನನ್ನ ನಂಬಿಕೆ. ಆಗ ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿನ ಅಸಹಜತೆಗಳನ್ನು ಹಿಂದಕ್ಕೆ ಬಿಟ್ಟು ಸಾಗಲು ಸಾಧ್ಯವಾಗುತ್ತದೆ. ಭಾರತ ಹಾಗೂ ಚೀನಾ ನಡುವಿನ ಸಂಬಂಧವು ಶಾಂತಿಯುತವಾಗಿ ಇರಬೇಕಿರುವುದು ಎರಡು ದೇಶಗಳಿಗೆ ಮಾತ್ರವೇ ಅಲ್ಲದೆ, ಇಡೀ ಜಗತ್ತಿಗೆ ಮಹತ್ವದ್ದು’ ಎಂದು ಕೂಡ ಮೋದಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT