ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಸರಣಿ ಸ್ಫೋಟ ಎನ್‌ಟಿಜೆ ಸಂಘಟನೆ ಕೃತ್ಯದ ಶಂಕೆ

ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ಸಾಧ್ಯತೆ * ಭದ್ರತಾ ಲೋಪಕ್ಕೆ ಅಸಮಾಧಾನ
Last Updated 22 ಏಪ್ರಿಲ್ 2019, 19:51 IST
ಅಕ್ಷರ ಗಾತ್ರ

ಕೊಲಂಬೊ: ಈಸ್ಟರ್‌ ಆಚರಣೆ ದಿನ ನಡೆದ ಸರಣಿ ಸ್ಫೋಟಗಳನ್ನು ನ್ಯಾಷನಲ್‌ ಥೌವೀತ್‌ ಜಮಾಥ್‌ (ಎನ್‌ಟಿಜೆ) ನಡೆಸಿರುವ ಶಂಕೆ ಇದೆ.

‘ಎನ್‌ಟಿಜೆ ಸ್ಥಳೀಯ ಸಂಘಟನೆಯಾಗಿದೆ. ಎಲ್ಲ ಆತ್ಮಹತ್ಯಾ ಬಾಂಬರ್‌ಗಳು ಶ್ರೀಲಂಕಾದವರು ಎನ್ನಲಾಗಿದೆ. ಎನ್‌ಟಿಜೆ ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ’ ಎಂದು ಆರೋಗ್ಯ ಸಚಿವ ಹಾಗೂ ಸರ್ಕಾರದ ವಕ್ತಾರ ರಜೀತ್‌ ಸೇನಾರತ್ನೆ ಸೋಮವಾರ ತಿಳಿಸಿದ್ದಾರೆ.

’ಬಾಂಬ್‌ ದಾಳಿ ನಡೆಯುವ ಸಾಧ್ಯತೆ ಬಗ್ಗೆ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥರು ಐಜಿಪಿಗೆ ಮಾಹಿತಿ ನೀಡಿದ್ದರು. ಏಪ್ರಿಲ್‌ 4ರಂದು ಅಂತರರಾಷ್ಟ್ರೀಯ ಗುಪ್ತಚರ ಇಲಾಖೆ ಸಹ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಏಪ್ರಿಲ್‌ 9ರಂದು ಐಜಿಪಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿತ್ತು’ ಎಂದು ವಿವರಿಸಿದ್ದಾರೆ.

’ಮುಖ್ಯವಾಗಿ ಭದ್ರತಾ ಲೋಪವೇ ಕಾರಣವಾಗಿರುವುದರಿಂದ ಪೊಲೀಸ್‌ ಮುಖ್ಯಸ್ಥ ಪುಜೀತ್‌ ಜಯಸುಂದರ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಸೇನಾರತ್ನೆ ಆಗ್ರಹಿಸಿದರು.

ದಾಳಿ ಬಗ್ಗೆ ಮಾಹಿತಿ ಗೊತ್ತಿದ್ದರೂ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಚಿವ ಹಾಗೂ ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್‌ ಪಕ್ಷದ ನಾಯಕ ರೌಫ್‌ ಹಕೀಮ್‌ ದೂರಿದ್ದಾರೆ. ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಸರಣಿ ಸ್ಫೋಟಗಳನ್ನು ಏಳು ಆತ್ಮಾಹುತಿ ಬಾಂಬರ್‌ಗಳು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರದಾದ್ಯಂತ ವಿಧಿಸಲಾಗಿದ್ದ ಕರ್ಫ್ಯೂ ಅನ್ನು ವಾಪಸ್‌ ಪಡೆಯಲಾಗಿದ್ದು, ಜನಜೀವನ ಸಹಜ ಸ್ಥಿತಿಗೆ
ಮರಳುತ್ತಿದೆ. ಆದರೆ, ಶಾಲೆಗಳು ಮತ್ತು ಷೇರುಮಾರುಕಟ್ಟೆಗಳನ್ನ ಮುಚ್ಚಲಾಗಿದೆ.

ದೇವರು ಎಲ್ಲಿದ್ದಾನೆ: ಮಕ್ಕಳ ಪ್ರಶ್ನೆ

‘ನನ್ನ ಮಕ್ಕಳು ಚರ್ಚ್‌ಗೆ ಹೋಗಲು ಭಯಪಡುತ್ತಿದ್ದಾರೆ. ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ದೇವರು ಎಲ್ಲಿದ್ದಾನೆ ಎಂದು ಈಗ ಅವರು ಕೇಳುತ್ತಿದ್ದಾರೆ...’

ಸರಣಿ ಸ್ಫೋಟಗಳಿಂದ ಆಘಾತಕ್ಕೆ ಒಳಗಾದ 52 ವರ್ಷದ ಕೊಲಂಬೊದ ಚರ್ಚಿಲ್‌ ಕರುಣಾರತ್ನೆ, ದಾಳಿಯಿಂದ ಅನುಭವಿಸಿದ ಸಂಕಟವನ್ನು ಕಣ್ಣೀರಿಡುತ್ತಾ ಬಿಚ್ಚಿಟ್ಟರು.

‘ಸ್ಫೋಟ ನಡೆದ ಬಳಿಕ ಚರ್ಚ್‌ಗೆ ಬಂದೆ. ಎಲ್ಲ ಕಡೆಯೂ ಶವಗಳಿದ್ದವು. ಭಯಾನಕ ಕೃತ್ಯವನ್ನು ನನ್ನ ಮಕ್ಕಳು ಟಿ.ವಿಯಲ್ಲಿ ನೋಡಿದ್ದಾರೆ. ಹೀಗಾಗಿ, ಚರ್ಚ್‌ಗೆ ಹೋಗಲು ಸಹ ಅವರು ಭಯಪಡುತ್ತಿದ್ದಾರೆ’ ಎಂದು ನುಡಿದರು.

ಕರುಣಾರತ್ನೆ ರೀತಿಯಲ್ಲಿ ಹಲವರು ದಾಳಿ ನಡೆದ ಬಳಿಕ ಕಂಡ ಭೀಕರ ಪರಿಸ್ಥಿತಿ ಮತ್ತು ನೋವುಗಳನ್ನು ವಿವರಿಸಿದರು.

ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಶಾಂತಾ ಪ್ರಸಾದ್‌, ‘ಇಂತಹ ಹಿಂಸಾಚಾರ ನೋಡಲು ಸಾಧ್ಯವಿಲ್ಲ. ನಾನು ಎಂಟು ಮಕ್ಕಳಿಗೆ ಚಿಕಿತ್ಸೆ ಕೊಡಿಸಿದೆ. ಅವರ ಬಟ್ಟೆಗಳು ಹರಿದು ರಕ್ತಸಿಕ್ತವಾಗಿದ್ದವು’ ಎಂದರು.

ಭಾನುವಾರ ನಡೆದ ದಾಳಿಯು ಮೂರು ದಶಕಗಳ ಕಾಲ ಎಲ್‌ಟಿಟಿಇ ಮತ್ತು ಸರ್ಕಾರದ ನಡುವೆ ನಡೆದ ಹಿಂಸಾಚಾರವನ್ನು ನೆನಪಿಸಿದೆ. ಆಗ ಬಾಂಬ್‌ ದಾಳಿಗಳು ನಿರಂತರವಾಗಿ ನಡೆಯುತ್ತಿದ್ದವು.

ರಾಜಧಾನಿಯಲ್ಲಿ ಕಸಗುಡಿಸುವ ಕೆಲಸದಲ್ಲಿ ತೊಡಗಿರುವ ಮಾಲತಿ ವಿಕ್ರಮಾ, ಅಂದಿನ ದಿನಗಳಿಗೂ ಈಗಿನ ಸ್ಥಿತಿಗೂ ಹೋಲಿಸಿದರು.

‘ಕಸ ಇರುವ ಕಪ್ಪು ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಮುಟ್ಟಲು ನಮಗೆ ಈಗ ಹೆದರಿಕೆಯಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಬಸ್‌ ಅಥವಾ ರೈಲುಗಳಲ್ಲಿ ಸಂಚರಿಸಲು ಹೆದರಿಕೆಯಾಗುತ್ತಿತ್ತು. ಈಗ ಹಳೆಯ ನೆನಪು ಮತ್ತೆ ಮರುಕಳಿಸಿದೆ. ಆಗ ಪಾರ್ಸಲ್ ಬಾಂಬ್‌ಗಳ ಮೂಲಕ ಸ್ಫೋಟಗಳು ನಡೆಯುತ್ತಿದ್ದವು’ ಎಂದು ವಿವರಿಸಿದರು.

‘ನಾವು ಸಾಕಷ್ಟು ಹಿಂಸಾಚಾರ ನೋಡಿದ್ದೇವೆ. ಹೊರಜಗತ್ತಿಗೆ ಇದು ಅತಿ ದೊಡ್ಡ ಕೃತ್ಯವಾಗಿರಬಹುದು. ಆದರೆ, ನಮಗೆ ಸಾಮಾನ್ಯ. ಜೀವನವನ್ನು ಎಂದಿನಂತೆ ಸಾಗಿಸಬೇಕು’ ಎಂದು 50 ವರ್ಷದ ನುವಾನ್‌ ಸಮರ್ವೀರಾ ತಮಗಾದ ಅನುಭವಗಳನ್ನು ಹೇಳಿದರು.

‘ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಚರ್ಚ್‌ಗೆ ಹೋಗಲು ಭಯವಾಗುತ್ತಿದ್ದರೂ ಅಲ್ಲಿಗೆ ತೆರಳಿ ಸಂತ್ರಸ್ತರಿಗಾಗಿ ಪ್ರಾರ್ಥಿಸುತ್ತೇವೆ’ ಎಂದು ರಂಜನ್‌ ಕ್ರಿಸ್ಟೊಫರ್‌ ಫರ್ನಾಂಡ್‌ ಹೇಳಿದರು.

ಇಂಟರ್‌ಪೊಲ್‌ ತಂಡ

ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸ್ಥಳೀಯ ಅಧಿಕಾರಿಗಳಿಗೆ ನೆರವಾಗಲು ತಜ್ಞರನ್ನು ಒಳಗೊಂಡ ತಂಡವನ್ನು ಇಂಟರ್‌ಪೊಲ್‌ ಕಳುಹಿಸಲಿದೆ.

‘ಶ್ರೀಲಂಕಾ ಮನವಿ ಮೇರೆಗೆ ಒಂದು ತಂಡವನ್ನು ಕಳುಹಿಸಲಾಗುವುದು. ಸ್ಫೋಟಕಗಳ ತಜ್ಞರು ಈ ತಂಡದಲ್ಲಿದ್ದಾರೆ. ಅಗತ್ಯವಿದ್ದರಿಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿರುವವರನ್ನು ಮತ್ತೆ ಕಳುಹಿಸಲಾಗುವುದು’ ಎಂದು ಇಂಟರ್‌ಪೊಲ್‌ ಕಾರ್ಯದರ್ಶಿ ಜನರಲ್ ಜರ್ಗನ್‌ ಸ್ಟಾಕ್‌ ತಿಳಿಸಿದ್ದಾರೆ.

ಕೋಟ್ಯಾಧಿಪತಿ ಮಕ್ಕಳ ಸಾವು

ಡ್ಯಾನಿಷ್‌ ಮೂಲದ ಬಹು ಕೋಟ್ಯಾಧಿಪತಿ ಆಂಡರ್ಸ್ ಹೊಲ್ಚ್ ಪೊವ್ಲ್‌ಸೆನ್‌ ಅವರ ಮೂವರು ಮಕ್ಕಳು ಸರಣಿ ಸ್ಫೋಟದಲ್ಲಿ ಮೃತರಾಗಿದ್ದಾರೆ.

ಸ್ಕಾಟ್‌ಲ್ಯಾಂಡ್‌ನಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ಹೆಗ್ಗಳಿಕೆ ಇವರದು. ಇವರ ಕುಟುಂಬ ಈಸ್ಟರ್‌ ರಜೆ ಕಳೆಯಲು ಶ್ರೀಲಂಕಾಗೆ ಬಂದಿತ್ತು.

ಇವರಿಗೆ ನಾಲ್ಕು ಮಕ್ಕಳಿದ್ದರು. ಇವರು ಪ್ರತಿಷ್ಠಿತ ‘ಬೆಸ್ಟ್‌ಸೆಲರ್‌’ ಸಿದ್ಧ ಉಡುಪು ಕಂಪನಿ ಮಾಲೀಕರಾಗಿದ್ದಾರೆ. ಅಸೋಸ್‌ ಜವಳಿ ಕಂಪನಿಯಲ್ಲಿ ಅತಿ ಹೆಚ್ಚು ಮೊತ್ತದ ಷೇರು ಹೊಂದಿದ್ದಾರೆ.

ಸ್ಫೋಟಿಸುವ ಉಪಕರಣಗಳ ಪತ್ತೆ

ಕೊಲಂಬೊದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ 87 ಬಾಂಬ್‌ ಸ್ಫೋಟಿಸುವ ಉಪಕರಣಗಳು ಪತ್ತೆಯಾಗಿವೆ.

ಮೊದಲು 12 ಉಪಕರಣಗಳು ಪತ್ತೆಯಾಗಿದ್ದವು. ಬಳಿಕ, ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದಾಗ ಮತ್ತೆ 75 ಉಪಕರಣಗಳು ಪತ್ತೆಯಾದವು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲಂಬೊದ ದಕ್ಷಿಣ ಭಾಗದ ಪಣಡುರಾದಲ್ಲಿ ಬಾಂಬರ್‌ಗಳು ಸುಮಾರು ಮೂರು ತಿಂಗಳುಗಳ ಕಾಲ ಅಡಗಿದ್ದ ಮನೆಯನ್ನು ಪೊಲೀಸರು ಸೋಮವರ ಪತ್ತೆ ಮಾಡಿದ್ದಾರೆ.

ಕೃತ್ಯ ನಡೆಸಿದವನ ಪತ್ನಿ, ಸಹೋದರಿ ಸಾವು

ಶಾಂಗ್ರಿಲಾ ಹೋಟೆಲ್‌ನಲ್ಲಿ ಆತ್ಮಹತ್ಯಾ ದಾಳಿ ನಡೆಸಿದವನ ಪತ್ನಿ ಮತ್ತು ಸಹೋದರಿ ಪ್ರತ್ಯೇಕ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.

ಇಲ್ಲಿ ದಾಳಿ ನಡೆಸಿದವನನ್ನು ಇನ್ಸಾನ್‌ ಸೀಲವನ್‌ ಎಂದು ಗುರುತಿಸಲಾಗಿದೆ. ಈತ ಅವಿಸ್ಸಾವೆಲ್ಲಾ–ವೆಲ್ಲಂಪಿಟಿಯಾ ರಸ್ತೆಯಲ್ಲಿ ಕಾರ್ಖಾನೆಯೊಂದನ್ನು ನಡೆಸುತ್ತಿದ್ದ ಎಂದು ’ಡೇಲಿ ಮಿರರ್‌’ ವರದಿ ಮಾಡಿದೆ.

ಕೊಲಂಬೊದ ಉತ್ತರ ಭಾಗದಲ್ಲಿರುವ ಡೆಮಾಟಗೊಡದ ಒರುಗೊಡವಟ್ಟದಲ್ಲಿರುವ ಇನ್ಸಾನ್‌ ಮನೆಗೆ ಪೊಲೀಸರ ತಂಡ ಶೋಧ ಕಾರ್ಯಾಚರಣೆಗೆ ತೆರಳಿದಾಗ ವ್ಯಕ್ತಿಯೊಬ್ಬ ಆತ್ಮಹತ್ಯಾ ದಾಳಿ ನಡೆಸಿದ. ಆಗ ಎರಡು ಅಂತಸ್ತಿನ ಕಟ್ಟಡ ಕುಸಿದು ಇನ್ಸಾನ್‌ ಪತ್ನಿ ಮತ್ತು ಸಹೋದರಿ ಹಾಗೂ ಒಬ್ಬ ಇನ್‌ಸ್ಪೆಕ್ಟರ್‌ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಸಾವಿಗೀಡಾಗಿದ್ದಾರೆ.

ಮತ್ತೊಂದು ಸ್ಫೋಟ

ಸೇಂಟ್‌ ಅಂಥೊನಿ ಚರ್ಚ್‌ ಸಮೀಪ ಸೋಮವಾರ ಮತ್ತೊಂದು ಸ್ಫೋಟ ಸಂಭವಿಸಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೊಟಹೆನಾ ಪ್ರದೇಶದಲ್ಲಿ ವಾಹನದಲ್ಲಿದ್ದ ಸ್ಫೋಟಕವನ್ನು ಬಾಂಬ್‌ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT