ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ | ರೋಬೊಕಾಲ್‌ ಹಗರಣ: ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

Published 20 ಸೆಪ್ಟೆಂಬರ್ 2023, 11:30 IST
Last Updated 20 ಸೆಪ್ಟೆಂಬರ್ 2023, 11:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸ್ವಯಂಚಾಲಿತ ರೋಬೊ ದೂರವಾಣಿ ಕರೆಗಳನ್ನು ಬಳಸಿಕೊಂಡು ಅಮೆರಿಕದಾದ್ಯಂತ ಹಲವು ಜನರನ್ನು ಬೆದರಿಸಿ ಸುಮಾರು ₹9.96 ಕೋಟಿ ಹಣ ವಸೂಲಿ ಮಾಡಿರುವ ‘ರೋಬೊಕಾಲ್‌ ಹಗರಣ’ದಲ್ಲಿ ಭಾಗಿಯಾದ ಇಬ್ಬರು ಭಾರತೀಯ ಪ್ರಜೆಗಳಿಗೆ 41 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅರುಶೋಬಿಕೆ ಮಿತ್ರ (29) ಮತ್ತು ಗರ್ಬಿತಾ ಮಿತ್ರ (25) ಶಿಕ್ಷೆಗೆ ಗುರಿಯಾದವರು. ಅಮೆರಿಕದ ಜಿಲ್ಲಾ ನ್ಯಾಯಾಧೀಶರಾದ ಎಸ್ತರ್‌ ಸಲಾಸ್‌ ಅವರ ಎದುರು ಈ ಇಬ್ಬರು ತಪ್ಪೊ‍ಪ್ಪಿಕೊಂಡಿದ್ದರು ಎಂದು ವಕೀಲ ಫಿಲಿಪ್ ಆರ್. ಸೆಲ್ಲಿಂಗರ್ ಮಂಗಳವಾರ ಹೇಳಿದ್ದಾರೆ.

‘ಈ ಪ್ರಕರಣದ ಸಂಚುಕೋರರು ಕೆಲವು ದುರ್ಬಲ ನಾಗರಿಕರನ್ನು ಗುರಿಯಾಗಿಸಿಕೊಂಡು ಅವರ ಬ್ಯಾಂಕ್‌ ಖಾತೆಗಳಿಂದ ಹಣ ಲಪಟಾಯಿಸಲು ಬೆದರಿಕೆ ತಂತ್ರಗಳನ್ನು ಬಳಸಿದ್ದರು’ ಎಂದು ಸೆಲ್ಲಿಂಗರ್ ಹೇಳಿದರು.

‘ಭಾರತ ಮೂಲದ, ಕ್ರಿಮಿನಲ್‌ ಹಿನ್ನೆಲೆಯ ಕಾಲ್ ಸೆಂಟರ್‌ಗಳು ಅಮೆರಿಕ ನಿವಾಸಿಗಳಿಗೆ ಅದರಲ್ಲೂ ವಯಸ್ಸಾದವರಿಗೆ ವಂಚಿಸುವ ಉದ್ದೇಶದಿಂದ ದೇಶದಾದ್ಯಂತ ಸಂತ್ರಸ್ತರನ್ನು ಸಂಪರ್ಕಿಸಲು ಸ್ವಯಂಚಾಲಿತ ರೋಬೊಕಾಲ್‌ಗಳನ್ನು ಬಳಸಿಕೊಂಡಿವೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳು ಹೇಳಿವೆ.

ಸಂಚುಕೋರರು, ಈ ಪ್ರಕರಣದ ಬಾಧಿತರಿಂದ ಹಣ ಲಪಟಾಯಿಸುವಾಗ ಸರ್ಕಾರಿ ಅಧಿಕಾರಿಗಳು, ಎಫ್‌ಬಿಐ ಅಥವಾ ಡಿಇಎಯಂತಹ ತನಿಖಾ ಏಜೆನ್ಸಿಗಳ ಅಧಿಕಾರಿಗಳ ಸೋಗು ಹಾಕುತ್ತಿದ್ದರು. ಹಣ ಕಳುಹಿಸದಿದ್ದರೆ ಕಠಿಣ ಕಾನೂನು ಕ್ರಮ ಅಥವಾ ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಸುತ್ತಿದ್ದರು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT